ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಾಡುತ್ತಿರುವ ಯಾವುದೇ ಪ್ಲಾನ್ ವರ್ಕಟ್ ಆಗುತ್ತಿಲ್ಲ.
ಹೀಗಾಗಿ ತ್ರಿಮೂರ್ತಿ ಸಚಿವರನ್ನು ಕೊರೊನಾ ನಿರ್ವಹಣೆಗಾಗಿ ತಂಡ ರಚಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಹಾಗೂ ಆರ್. ಅಶೋಕ್ ತಂಡದಲ್ಲಿದ್ದಾರೆ.

ಕೊರೊನಾ ವಿಚಾರದಲ್ಲಿ ಸಚಿವರ ನಡುವೆ ನಡೆಯುತ್ತಿರುವ ಸಮನ್ವಯತೆ ಕೊರತೆ ನೀಗಿಸಲು ಈ ತಂಡ ರಚಿಸಲಾಗಿದೆ. ಕೋವಿಡ್‍ಗೆ ಸಂಬಂಧಿಸಿದ ನೀತಿ ನಿರೂಪಣೆ, ಗೈಡ್‍ಲೈನ್ಸ್ ತಯಾರಿ ಈ ತಂಡದ ಜವಾಬ್ದಾರಿಯಾಗಿದೆ.

ಕೊರೊನಾಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವುದು ಸಚಿವ ಡಾ.ಸುಧಾಕರ್ ಮಾತ್ರ. ಕೋವಿಡ್ ಕೇರ್ ಕೇಂದ್ರಗಳ ಹೊಣೆಗಾರಿಯನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರಿಗೆ ವಹಿಸಲಾಗಿದೆ. ಕೊರೊನಾ ರೋಗಿಗಳ ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳ ನಿರ್ವಹಣೆ ಹಾಗೂ ಸಮನ್ವಯತೆ ಜವಾಬ್ದಾರಿಯನ್ನು ಆರ್. ಅಶೋಕ್‍ಗೆ ನೀಡಲಾಗಿದೆ.








