ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟನಲ್ಲಿ ಮನೆಯಿಂದ ಹೊರಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆದೇಶ ಹೊರಡಿಸಿವೆ.
ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹಾಗೂ ಬಿಬಿಎಂಪಿ ನಿಯೋಜನೆ ಮಾಡಿರುವ ಮಾರ್ಷಲ್‍ಗಳಿಂದ ಮಾಸ್ಕ್ ಧರಿಸದವರು ಹಾಗೂ ಸಾಮಾಜಿಕ ಅಂತರ ಕಾಪಾಡದವರಿಂದ ಸಂಗ್ರಹವಾದ ಮೊತ್ತ 1 ಕೋಟಿ ದಾಟಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ದಂಡವನ್ನು ಬೆಂಗಳೂರು ನಗರದಲ್ಲಿ ಸಂಗ್ರಹಿಸಲಾಗಿದೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಂದ ಇಷ್ಟೊಂದು ದಂಡ ಸಂಗ್ರಹಿಸಿರುವುದಕ್ಕೆ ನಾವು ಸಂಭ್ರಮ ಪಡುತ್ತಿಲ್ಲ ಅಥವಾ ಸಾಧನೆ ಎಂದು ಭುಜ ತಟ್ಟಿಕೊಳ್ಳುತ್ತಿಲ್ಲ. ಆದರೆ, ನಮ್ಮ ಜನರು ತಮ್ಮ ಹಾಗೂ ಇತರರ ಆರೋಗ್ಯದ ಸಲುವಾಗಿ ಮಾಸ್ಕ್ ಹಾಕಿ ಎಂದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಮ್ಮೆಲ್ಲರ ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.









