ಮದುವೆಯೆನ್ನುವ ಮಧುರ ಬಂಧನ
ಮೊದ ಮೊದಲು ಚಿಗುರಿದ ಕನಸುಗಳು.ಮುಂದಿನ ಜೀವನದ ಬಗೆಗೆ ಬಯಕೆಗಳು.ಮನಕೆ ಮುದ ಕೊಡುವಂತಿತ್ತು ಅಂದಿನ ಪ್ರಕ್ರತಿಯ ಸೊಬಗು.ಕಡಲ ತೀರದಲಿ ಕುಳಿತ್ತಿದ್ದ ಅವಳ ಮನಸು ನೀರಿನಂತೆ ಹರಿಯುತಿತ್ತು ನೂರು ಕನಸುಗಳೆಡೆಗೆ.ಕಡಲ ತೀರವ ಸೇರುತ್ತಿದ್ದ ಅಲೆಗಳ ಜೊತೆಗೆ ಹೆಣೆಯುತ್ತಿದ್ದಳವಳು ತನ್ನ ಜೀವನವ. ಹೆಣ್ಣಾಗಿ ಹುಟ್ಟಿದ ಮೇಲೆ ಹುಟ್ಟಿದ ಮನೆಯ ಬಿಟ್ಟು ಹೋಗಬೇಕು ಅವಳು ಗಂಡನ ಮನೆಗೆ.ಮದುವೆ ಎಂಬ ಮಧುರ ಬಂದನನದಲ್ಲಿ ಬಂದಿಯಾಗಲೇಬೇಕವಳು.ತನ್ನ ಜೀವನಕ್ಕೊಂದು ಅರ್ಥಸಿಗುವ ಕಾಲ ಬಂದಾಗ ಅವಳ ಕನಸುಗಳು ನೂರು.ಬಯಸಿದ ಜೀವನ ಸಿಗದೆ ಹೋದರೆ ಅವಳ ಬದುಕಿಗೆ ಅರ್ಥವೇನು?…..

ಅವಳಂತೆ ಪ್ರತೀ ಹೆಣ್ಣಿನ ಮನಸು ತನ್ನ ಜೀವನದ ಬಗ್ಗೆ ಕನಸುಗಳ ಗೂಡನ್ನು ಕಟ್ಟಿಕೊಂಡಿರುತ್ತದೆ.ಬದುಕಿಗೊಂದು ಅರ್ಥ ಸಿಗುವ ಕಾಲವದು.ತನ್ನದೇ ಪ್ರಪಂಚದೊಳು ಬದುಕುತ್ತಿದ್ದ ಹೆಣ್ಣೊಬ್ಬಳು ಇನ್ನೊಂದು ಮನೆ ಬೆಳಗಲು ಹೋಗಬೇಕು.ಹೆಣ್ಣಿನ ಬದುಕೆ ಹಾಗೆ ನದಿಯ ರೀತಿ ಎಲ್ಲೊ ಹುಟ್ಟಿ ದೂರದಲೆಲ್ಲೊ ಇರುವ ಸಾಗರವ ಸೇರುವಂತೆ. ಆದರೆ ಸಾಗರವ ಸೇರುವ ನದಿ ತನ್ನ ದಾರಿಯನ್ನು ತಾನೇ ರೂಪಿಸಿಕೊಂಡಿರುತ್ತದೆ ಆದರೆ ಹೆಣ್ಣಿಗೆ ಆ ಸ್ವಾತಂತ್ರ್ಯ ಇಲ್ಲದಂತಾಗಿದೆ……….
ಹೆಣ್ಣು ಅಂದರೆ ಕೇವಲ ಹಣ ಆಸ್ತಿಯನ್ನು ಮಾತ್ರ ಇಷ್ಟಪಡುವವಳು ಎನ್ನುವುದು ಈ ಸಮಾಜದ ಅಭಿಪ್ರಾಯ.. ಆದರೆ ಮದುವೆಯೆನ್ನುವ ಮಧುರ ಬಂಧನದಲ್ಲಿ ಬಂಧಿಯಾಗುವ ಅವಳ ಮನದಲ್ಲಿ ತುಂಬಿರುವ ಪ್ರೀತಿಯನ್ನು ಯಾರು ಅರಿತುಕೊಳ್ಳುವುದೇ ಇಲ್ಲ…ಏಕೆ ಹೀಗೆ?….ನನಗೂ ತಿಳಿಯುತ್ತಿಲ್ಲ..
ಪ್ರತಿ ಹೆಣ್ಣು ತನ್ನ ಮನದೊಳಗೆ ತನ್ನ ಜೀವನದ ಬಗ್ಗೆ ಕನಸೊಂದನ್ನು ಕಟ್ಟಿಕೊಂಡಿರುತ್ತಾಳೆ
ಮದುವೆ ಎನ್ನುವ ಮೂರಕ್ಷರದ ಪದ ಹೆಣ್ಣಿನ ಜೀವನವೆಂಬ ತೇರನ್ನು ಎಳೆಯುವ ಚಕ್ರದಂತೆ.ತೇರನೆಳೆಯಲು ಅವಳ ಬದುಕಿಗೊಂದು ಅರ್ಥ ನೀಡಲು ಸಂಗಾತಿಯ ಅವಶ್ಯಕತೆ ಅತಿಮುಖ್ಯ…

ನಾವೊಮ್ಮೆ ಯೋಚಿಸಿದಾಗ ಮದುವೆ ಹೆಣ್ಣಿನ ಬದುಕನ್ನು ಎಷ್ಟೊಂದು ಬದಲಾಯಿಸುತ್ತದೆ ಎಂಬುದನ್ನು ಅರಿಯಬಹುದು.ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರು ಇಂದಿಗೂ ಹೆಣ್ಣಿಗೆ ತನ್ನ ಜೀವನದ ಸಂಗಾತಿಯನ್ನು ಆರಿಸಿಕೊಳ್ಳಲು ಸ್ವಾತಂತ್ರ್ಯವಿಲ್ಲದಂತಾಗಿದೆ.ಅದೆಷ್ಟೋ ಸಂಧರ್ಭಗಳು ಯಾರದೋ ಒತ್ತಾಯಕ್ಕಾಗಿ ಮನಸ್ಸೆ ಒಪ್ಪದ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಪಡೆದು ತನ್ನ ಜೀವನದ ಕೊನೆಯವರೆಗು ಅವನೊಡನೆ ಸಂಸಾರ ಸಾಗಿಸಬೇಕಾಗಿದೆ.ತನ್ನ ಬದುಕನ್ನು ಇನ್ನೊಬ್ಬರ ಒತ್ತಾಯಕ್ಕಾಗಿ ಬಾಳಬೇಕಾಗುತ್ತದೆ…..ನಾವು ಇಷ್ಟಪಡದೆ ಇರುವ ವ್ಯಕ್ತಿಯೊಡನೆ ಒಂದೊಮ್ಮೆ ಮಾತನಾಡಬೇಕಾದರೆ ನಮಗೆ ಹಿಂಸೆಯೆನಿಸುತ್ತದೆ ಅಲ್ಲವೇ?.ಹಾಗಿದ್ದ ಮೇಲೆ ಹೆಣ್ಣೊಬ್ಬಳು ಜೀವನ ಪೂರ್ತಿ ತನಗೆ ಇಷ್ಟವಿಲ್ಲದ ವ್ಯಕ್ತಿಯೊಡನೆ ಬದುಕುವುದು ಎಷ್ಟು ಕಷ್ಟವೆನಿಸಬಹುದು…

ಮಗಳಾಗಿ, ಅಕ್ಕನಾಗಿ, ತಂಗಿಯಾಗಿ,ಹೆಂಡತಿಯಾಗಿ, ತಾಯಿಯಾಗಿ ಹೆಣ್ಣು ತನ್ನ ಜೀವನವನೆಲ್ಲ ಸಂಸಾರವೆಂಬ ಸಾಗರಕ್ಕೆ ಅರ್ಪಿಸುತ್ತಾಳೆ.ಸಂಸಾರವೆಂಬ ಸಾಗರದಲ್ಲಿ ಹೆಣ್ಣಿನ ಪಾತ್ರ ಅತೀ ಮುಖ್ಯ ಆದರೆ ಆಕೆಯ ಜೀವನಕ್ಕೊಂದು ಅರ್ಥ ಸಿಗಬೇಕಾದರೆ ಅವಳಿಗೆ ಸಂಗಾತಿ ಮುಖ್ಯ.
ಅದೆಷ್ಟೊ ವರ್ಷ ಅಪ್ಪ – ಅಮ್ಮ , ಅಣ್ಣ – ತಂಗಿಯರೊಡನೆ ಮುದ್ದಾಗಿ ಬೆಳೆದ ಹೆಣ್ಣು ತಾನು ಹುಟ್ಟಿದ ಮನೆ ತನ್ನವರೆನ್ನುವವರನ್ನೆಲ್ಲ ಬಿಟ್ಟು .ತನಗೆ ಪರಿಚಯವೆ ಇಲ್ಲದ ಇನ್ನೊಂದು ಮನೆಗೆ ಹೋಗಿ ತನ್ನವರನ್ನು ಕಾಣಬೇಕಾದ ಪರಿಸ್ಥಿತಿ ಬಂದಾಗ ಆಕೆಯ ಮನದ ಆತಂಕ ಯಾರಿಗೂ ಅರಿಯದಂತದ್ದು.ಮದುವೆ ಯೆನ್ನುವುದು ಹೆಣ್ಣಿಗೆ ಮಧುರ ಬಂಧನವಾಗುವುದು ಆಕೆ ಒಪ್ಪಿದ ಸಂಗಾತಿಯನ್ನು ಪಡೆದಾಗ ಮಾತ್ರ.ಜೀವನದ ಕೊನೆಯವರೆಗು ಜೊತೆಯಾಗಿರುವ ಸಂಗಾತಿಯನ್ನು ಆರಿಸುವ ಹಕ್ಕು ಅವಳಿಗಿದೆ.
ಮದುವೆ ಎನ್ನುವ ಮೂರಕ್ಷರದ ನೂರು ಅರ್ಥವಿರುವ ಬಂದನ ಹೆಣ್ಣಿಗೆ ಸಂತೋಷವೆಂಬ ಸುಂದರ ಬದುಕನ್ನು ನೀಡುವಂತಿರಬೇಕು.ಅದು ಎಂದಿಗೂ ಅವಳ ಜೀವನವನ್ನು ದುಃಖವೆಂಬ ನರಕಕ್ಕೆ ತಳ್ಳುವಂತಿರಬಾರದು.

ಹೆತ್ತ ತಂದೆ – ತಾಯಿಯ ಬಯಕೆಯು ತಮ್ಮ ಮಗಳ ಜೀವನ ಸುಂದರವಾಗಿರಬೇಕೆಂದು.ಎಂದಿಗೂ ಮಗಳ ಬದುಕು ನರಕವಾದರೆ ಅವರ ಮನ ಸಹಿಸಲಾರದು.ಹಾಗ್ಗಿದ್ದ ಮೇಲೆ ಹೆತ್ತವರೊಮ್ಮೆ ಯೋಚಿಸಬೇಕಿದೆ.ತಮ್ಮ ಮಗಳ ಜೀವನ ಸಂಗಾತಿಯಾಗುವವನು ಅವಳ ಮನಕೆ ಮೆಚ್ಚುಗೆಯಾಗಿರುವನೆ ಎಂದು ಅರಿಯಬೇಕಿದೆ.
ಪ್ರೀತಿ ಮನಸ್ಸಿಗೆ ಹಿತವನ್ನು ನೀಡಬೇಕು ಹೊರತು ನಾವು ತೋರುವ ಪ್ರೀತಿಯೇ ಕಷ್ಟವಾಗಬಾರದು.ಮದುವೆಯೆನ್ನುವ ಹೆಣ್ಣಿನ ಕನಸು ಆಕೆ ಮೆಚ್ಚುವಂತಿರಬೇಕು ಅವಳಿಗೊಂದು ಬಾಂಧವ್ಯದ ಬೆಸುಗೆಯಾಗಬೇಕು……ಅಪರಿಚಿತನೊಡನೆ ಜೀವನವ ಕಾಣಲು ಹೊರಟಿರುವ ಹೆಣ್ಣಿನ ಮನದೊಳಗೂ ನೂರು ಕನಸುಗಳಿರುತ್ತದೆ.ತನ್ನದೆನ್ನುವ ಹೊಸದಾದ ಸಂಸಾರವ ಕಟ್ಟಲು ಹೊರಟಿರುವ ಅವಳು ತನ್ನ ಮನದೊಳಗೆ ಕನಸ್ಸನ್ನು ಕಟ್ಟಿಕೊಂಡಿರುತ್ತಾಳೆ.ತನ್ನ ಮೆಚ್ಚಿ ಸಂಗಾತಿಯಾದವನ ಕನಸೇ ಆಕೆಯ ಬದುಕಾಗಿರುತ್ತದೆ.ಅವನ ಸಂಸಾರವೇ ಅವಳದಾಗಿರುತ್ತದೆ.ತನ್ನದೆನ್ನುವ ಪುಟ್ಟ ಪ್ರಪಂಚದಲ್ಲಿ ಅವಳು ಬಯಸೋ ಜಾಗ ಅವನೆದೆಯಲಿ ತನಗಾಗಿ ಒಂದು ಪುಟ್ಟ ಗೂಡು.ಸಂಗಾತಿಯಾಗಿ ಅವನೆಲ್ಲ ದುಃಖ – ಸುಖದಲಿ ಅವಳು ಭಾಗಿಯಾಗುತ್ತಾಳೆ.ಅದೆಷ್ಟೊ ಬಾರಿ ಸಂಗಾತಿಗಾಗಿ ತನ್ನೆಲ್ಲ ಕನಸ ಮರೆಮಾಚುತ್ತಾಳೆ ಅಂತಹ ಹೆಣ್ಣಿನ ಮನಸ್ಸನ್ನು ಅರಿತು ಮದುವೆಯೆನ್ನುವ ಮಧುರ ಬಂದನದಲ್ಲಿ ಆಕೆಯನ್ನು ಬಂಧಿಯಾಗಿಸುವ ಮೊದಲು ಅವಳದೊಂದು ಒಪ್ಪಿಗೆ ಪಡೆದು ಅವಳ ಕನಸ್ಸಿಗೊಂದು ಅರ್ಥವ ನೀಡೋಣ.

ಒಂದು ಸುಂದರವಾದ ಜೀವನವನ್ನು ರೂಪಿಸಿಕೊಳ್ಳಲು ಮದುವೆ ಅಡಿಪಾಯವಾಗಬೇಕು.ಇದು ಎಲ್ಲ ಹೆಣ್ಣು ಮಕ್ಕಳ ಹಿತವಾದ ಮದುವೆಯೆನ್ನುವ ಕನಸು.ಮನಮೆಚ್ಚಿದ ಸಂಗಾತಿಯೊಡನೆ ಮದುವೆಮಾಡಿ ಅವಳಿಗೊಂದು ಮದುವೆ ಎನ್ನುವ ಮಧುರ ಬಂಧನವ ಉಡುಗೊರೆಯಾಗಿ ನೀಡಿ ಅವಳ ಜೀವನಕ್ಕೊಂದು ಅರ್ಥ ನೀಡೋಣ
ಶ್ವೇತಾ ದೇವಾಡಿಗ, ಕಾರ್ಕಳ








