ಕಾಂಗ್ರೆಸ್ ನವರು ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ.. ನನಗೆ ರಾಜ್ಯದ ಜನರ ಹಿತ ಮುಖ್ಯ- ಎಚ್.ಡಿ. ಕುಮಾರಸ್ವಾಮಿ
ನನಗೆ ರಾಜ್ಯದ ಜನರ ಹಿತ ಮುಖ್ಯ. ಜನತೆಯ ಆರೋಗ್ಯ ಮುಖ್ಯ. ನನ್ನ ಜನರಿಗೋಸ್ಕರ ಹೋರಾಟ ಮಾಡುತ್ತೇನೆ. ಕಾಂಗ್ರೆಸ್ ಪ್ರಚಾರಕ್ಕಾಗಿ ಪ್ರತಿಭಟನೆ, ಧರಣಿ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‍ಗೆ ಟಾಂಗ್ ಕೊಟ್ಟಿದ್ದಾರೆ.
ಈಗ ಟೀಕೆ ಮಾಡುವ, ಆರೋಪ ಮಾಡುವ ಸಮಯವಲ್ಲ. ಜನರ ಜೀವ ಉಳಿಸಿಕೊಳ್ಳಲು ಸಲಹೆ ಕೊಡಿ. ವಿರೋಧ ಪಕ್ಷ ಇರೋದು ಟೀಕೆ ಮಾಡೋಕೆ. ಹಾಗಂತ ಈಗ ಟೀಕೆ ಮಾಡುವುದು ಸೂಕ್ತವಲ್ಲ. ಬದಲಾಗಿ ಜನರ ಆರೋಗ್ಯವನ್ನು ಹೇಗೆ ಕಾಪಾಡುವುದು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕಾಗುತ್ತದೆ. ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು. ಇದು ಈಗಿನ ಸನ್ನಿವೇಶದಲ್ಲಿ ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್‍ನವರು ಸರ್ಕಾರದ ವಿರುದ್ಧ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ. ಆದ್ರೆ ಈ ಆರೋಪ ಈಗ ಮಾಡುವುದಲ್ಲ. ಅದಕ್ಕೆ ಇನ್ನೂ ಸಮಯವಿದೆ. ಅವಕಾಶವಿದೆ. ಆಗ ಚರ್ಚೆ ಮಾಡೋಣ. ಹೋರಾಟ ನಡೆಸೋಣ. ಆದ್ರೆ ರಾಜ್ಯ ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಬೇಕು. ಪಕ್ಷ ಭೇಧ ಮರೆತು
ಎಲ್ಲರೂ ಜೊತೆಯಾಗಿ ರಾಜ್ಯದ ಜನತೆಯ ಹಿತ ಕಾಪಾಡಬೇಕು ಎಂದು ಹೇಳಿದ್ರು.
ಹಾಗೇ ಕಾಂಗ್ರೆಸ್ ನವರು ರಾಜಸ್ತಾನದ ಬಿಕ್ಕಟ್ಟಿಗೆ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದು ಕೂಡ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ. 500 ಸಾವಿರ ಜನರನ್ನು ಒಟ್ಟುಗೂಡಿಸಿಕೊಂಡು ಇವರು ಪ್ರತಿಭಟನೆ ನಡೆಸಿದ್ರೆ ಜನರಿಗೆ ಏನು ಸಂದೇಶ ಹೋಗುತ್ತೆ ? ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಾವೇ ಹೇಳುತ್ತಿದ್ದೇವೆ. ಇವರು ಅದನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ರು.
ನನಗೆ ರಾಜಸ್ತಾನ ಮುಖ್ಯವಲ್ಲ. ನನಗೆ ನನ್ನ ರಾಜ್ಯದ ಜನ ಮುಖ್ಯ. ಕಾಂಗ್ರೆಸ್‍ನವರು ಜೆಡಿಎಸ್ ಪಕ್ಷವನ್ನು ಮುಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದು ಅವರಿಂದ ಸಾಧ್ಯವಿಲ್ಲ. ಜನ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಜೊತೆ ಕೈ ಜೋಡಿಸಲು ನನಗೆ ಇಷ್ಟವಿರಲಿಲ್ಲ. ಆದ್ರೆ ದೇವೇಗೌಡರ ಮಾತಿಗೆ ಬೆಲೆಕೊಟ್ಟು ಸಮ್ಮಿಶ್ರ ಸರ್ಕಾರಕ್ಕೆ ಸಮ್ಮತಿ ಸೂಚಿಸಿದ್ದೆ. ನನಗೆ ಬಿಜೆಪಿಯಿಂದಲೂ ಆಫರ್ ಇತ್ತು. ಆದ್ರೆ ದೇವೇಗೌಡರ ರಾಜಕಾರಣಕ್ಕೆ ದಕ್ಕೆಯಾಗಬಾರದು ಎಂದು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೆ ಎಂದು ಎಚ್‍ಡಿಕೆ ತಿಳಿಸಿದ್ದಾರೆ.
ಇನ್ನು ನನ್ನ ಜೊತೆ ಯಾವ ಕಾಂಗ್ರೆಸ್ ನಾಯಕರು ಕೂಡ ಸಂಪರ್ಕದಲ್ಲಿಲ್ಲ. ನನ್ನ ಹೋರಾಟ ಕಾಂಗ್ರೆಸ್ ವಿರುದ್ಧವೇ. ಅವರು ನಮ್ಮ ಪಕ್ಷವನ್ನು ಮುಗಿಸೋಕೆ ಪ್ರಯತ್ನ ನಡೆಸುತ್ತಿದ್ದಾರೆ. ಬಿಎಸ್‍ವೈ ಬಿಜೆಪಿ ಪಕ್ಷ ಬಿಡದಿದ್ರೆ ಕಾಂಗ್ರೆಸ್ ಪೂರ್ಣ ಪ್ರಮಾಣದ ಬಹುಮತ ಪಡೆಯುತ್ತಿರಲಿಲ್ಲ ಎಂದ ಅವರು, ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಕಾರಣ ನಮಗೆ ಕಳೆದ ಚುನಾವಣೆಯಲ್ಲಿ ಕಡಿಮೆ ಸೀಟ್ ಬಂತು. ಹಾಗೇ 2008ರ ಬಿಜೆಪಿ ಸರ್ಕಾರದ ವಿರುದ್ಧ ದಾಖಲೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದವನೇ ನಾನು. ಕಾಂಗ್ರೆಸ್ ನವರು ಎಲ್ಲಿ ಹೋರಾಟ ಮಾಡಿದ್ದರು ಎಂದು ಎಚ್‍ಡಿಕೆ ಹೇಳಿದ್ದಾರೆ.








