‘ನನ್ನ ಹಸ್ತಾಂತರದ ಬಗ್ಗೆ ಯಾರು ಏನು ಸುದ್ದಿ ಮಾಡಿದ್ದಾರೋ ಅದು ಅವರಿಗಷ್ಟೇ ಗೊತ್ತು – ವಿಜಯ್ ಮಲ್ಯ
ಲಂಡನ್, ಜೂನ್ 5 : ಬ್ರಿಟನ್ ಗೆ ಪರಾರಿಯಾಗಿರುವ ಮಲ್ಯ ಅವರ ಹಸ್ತಾಂತರ ಸದ್ಯಕ್ಕೆ ಇಲ್ಲ ಎಂದು ಬ್ರಿಟನ್ ನಲ್ಲಿರುವ ಭಾರತದ ಹೈಕಮೀಷನರ್ ಪ್ರತಿಕ್ರಿಯಿಸಿದೆ.
ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ ಮಲ್ಯ ಯಾವುದೇ ಕ್ಷಣದಲ್ಲೂ ಭಾರತಕ್ಕೆ ಹಸ್ತಾಂತರ ಆಗಬಹುದು ಎಂಬ ಸುದ್ದಿ ಬುಧವಾರದಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸದ್ಯದಲ್ಲೇ ಭಾರತಕ್ಕೆ ವಿಜಯ್ ಮಲ್ಯ ಹಸ್ತಾಂತರ ಅಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ದಿ ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿರುವಂತೆ, ವಿಜಯ್ ಮಲ್ಯ ಅವರು ಭಾರತಕ್ಕೆ ಹಸ್ತಾಂತರ ಆಗುತ್ತಿಲ್ಲ ಎಂದು ಮಾಹಿತಿ ನೀಡಿದೆ. ವಿಜಯ್ ಮಲ್ಯ ಅವರ ಆಪ್ತರು ಕೂಡ ಹಸ್ತಾಂತರದ ವರದಿಗಳನ್ನು ನಿರಾಕರಿಸಿದ್ದು, ಮಲ್ಯ ಇನ್ನೂ ಬ್ರಿಟನ್ ನಲ್ಲಿ ಕಾನೂನು ಹೋರಾಟ ಮುಂದುವರಿಸಿದ್ದು, ಸದ್ಯಕ್ಕೆ ಭಾರತಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿರುವಂತೆ ಮಲ್ಯರ ವಕೀಲ ಆನಂದ ದುಬೆ ಅವರು ವಿಜಯ್ ಮಲ್ಯರ ಹಸ್ತಾಂತರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಸ್ವತಃ ಮಲ್ಯ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ವಾಟ್ಸಪ್ ಮಾಡಿ, ‘ನನ್ನ ಹಸ್ತಾಂತರದ ಬಗ್ಗೆ ಯಾರು ಏನು ಸುದ್ದಿ ಮಾಡಿದ್ದಾರೋ ಅದು ಅವರಿಗಷ್ಟೇ ಗೊತ್ತು ಎಂದು ಸಂದೇಶ ಕಳುಹಿಸಿರುವುದಾಗಿ ತಿಳಿಸಿದೆ.
ಬ್ರಿಟನ್ ನಲ್ಲಿರುವ ಭಾರತದ ಹೈಕಮೀಷನರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲಂಡನ್ ನಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಗೊಳಿಸುವ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಅವರನ್ನು ಭಾರತಕ್ಕೆ ಹಸ್ತಾಂತರಿಸಲು ‘ಲಂಡನ್ ಆಶ್ರಯ ಹಕ್ಕಿ’ ಗೆ ಸಂಬಂಧಿಸಿದಂತೆ ಮತ್ತೊಂದು ಕಾನೂನು ತೊಡಕು ಎದುರಾಗಿದ್ದು, ಆ ಸಮಸ್ಯೆ ಬಗೆಹರಿಯದ ಹೊರತು ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.








