ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
ರಾಜ್ಯದ (state)ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ 24X7 ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Sudhakar)ಹೇಳಿದ್ದಾರೆ.
ಬುಧವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ‘ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ರೋಗಿಗಳ ಸ್ಪಂದನೆಗಾಗಿ ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಇದರ ನಿರ್ವಹಣೆಗಾಗಿ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. 24X7 ಸಹಾಯವಾಣಿಯಲ್ಲಿ ಪ್ರತಿ ಪಾಳಿಯಲ್ಲಿ ಬೆಳಿಗ್ಗೆ ಇಬ್ಬರು ಮತ್ತು ರಾತ್ರಿ ಇಬ್ಬರು ಸಿಬ್ಬಂದಿಗಳಂತೆ ರೋಗಿಗಳಿಗೆ ಸ್ಪಂದಿಸಲಿದ್ದಾರೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
ತುಮಕೂರಿನಲ್ಲಿ ನಡೆದ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಮತ್ತೊಮ್ಮೆ ಮರುಕಳಿಸಬಾರದೆಂದು ತುಮಕೂರು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು.
ಆರೋಗ್ಯ ಇಲಾಖೆ ಆಯುಕ್ತರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.
ತಾಯಿ ಮತ್ತು ಅವಳಿ ಶಿಶುಗಳ ಸಾವಿನ ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಆ ಘಟನೆ ನಡೆದ ದಿನ ಕರ್ತವ್ಯದಲ್ಲಿದ್ದ ಡಾ.ಉಷಾ, ಸರ್ಕಾರಿ ವೈದ್ಯರ ಸಂಘಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿ, ಮೃತ ಮಹಿಳೆ ಹಾಗೂ ವೈದ್ಯೆ ಉಷಾ ಒಟ್ಟಿಗೆ ಇರುವುದನ್ನು ಗಮನಿಸಿದ ನಂತರವೇ ವೈದ್ಯೆಯನ್ನು ಅಮಾನತು ಮಾಡಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟ ಮಹಿಳೆಯ ತಬ್ಬಲಿ ಪುತ್ರಿಗೆ ಆರೋಗ್ಯ ಇಲಾಖೆಯಿಂದ ₹10 ಲಕ್ಷ ನೆರವು ನೀಡಲು ನಿರ್ಧರಿಸಲಾಗಿದ್ದು, ಹಣವನ್ನು ಬಾಲಕಿ ಹೆಸರಲ್ಲಿ ಠೇವಣಿ ಇಡಲಾಗುವುದು. ಆಕೆಗೆ 18 ವರ್ಷ ತುಂಬಿದ ಬಳಿಕ ಆ ಹಣವು ಅವಳ ಕೈ ಸೇರಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.








