ಹೆದ್ದಾರಿಯಲ್ಲಿ ಕ್ಯಾಮೆರಾ ಕಣ್ಗಾವಲು – ನಿಯಮ ಉಲ್ಲಂಘಿಸಿದರೆ ವಾಹನಗಳಿಗೆ ದಂಡ ಗ್ಯಾರಂಟಿ
ರಾಜ್ಯ ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಮೆರಾ ಕಣ್ಗಾವಲು ಹಾಕುತ್ತಿದ್ದು, ಇನ್ನು ಮುಂದೆ ವಾಹನಗಳು ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ.
ರಾಜ್ಯ ಪೊಲೀಸ್ ಇಲಾಖೆ ಈ ಯೋಜನೆಯ ಅನುಷ್ಠಾನಕ್ಕೆ ಪ್ರಥಮ ಹಂತದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಂಡಿದೆ.
ಪ್ರಾಯೋಗಿಕವಾಗಿ ನಡೆಯುತ್ತಿರುವ ಈ ಯೋಜನೆಯಲ್ಲಿ ಬೆಂಗಳೂರಿನಿಂದ ಬೆಳಗಾವಿವರೆಗಿನ ಏಳು ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿಕೊಂಡಿದ್ದು, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.
ಪೊಲೀಸ್ ಇಲಾಖೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಮೀರಿ ಸಂಚರಿಸುವ ಭಾರೀ ವಾಹನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಿದೆ. ಹಾಗಾಗಿ ಇನ್ನು ಮುಂದೆ ಭಾರೀ ವಾಹನಗಳು ಹೆದ್ದಾರಿಯಲ್ಲಿ ತಮಗಾಗಿಯೇ ಇರುವ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಿದರೆ ಕ್ಯಾಮೆರಾಗಳು ಅಂಥ ವಾಹನಗಳ ಮಾಹಿತಿಯನ್ನು ಟೋಲ್ ಬಳಿ ಸರ್ವರ್ಗೆ ರವಾನಿಸುತ್ತದೆ.
ಸಂಚಾರಿ ನಿಯಮ ಉಲ್ಲಂಘಿಸಿದ ವಾಹನವು ಮುಂದಿನ ಟೋಲ್ ಬಳಿ ಬಂದಾಗ ಅಲ್ಲಿ ಇದಕ್ಕಾಗಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗೆ ದಂಡ ಕಟ್ಟಿ ಮುಂದೆ ಸಾಗಬೇಕಾಗುತ್ತದೆ.
ಪೊಲೀಸ್ ಇಲಾಖೆಯು ಭಾರೀ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ನಿಯಮ ಮೀರಿ ಸಂಚರಿಸುವುದರಿಂದ ಉಂಟಾಗುವ ಅಪಘಾತಗಳನ್ನು ನಿಯಂತ್ರಿಸಲು ಈ ಯೋಜನೆಯನ್ನು ರೂಪಿಸಿದೆ.
ಹೆದ್ದಾರಿಯಲ್ಲಿ ಯಾವ ವಿಧದ ವಾಹನ, ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬ ಬಗ್ಗೆ ಈಗಾಗಲೇ ಸೂಚನಾ ಫಲಕ ಹಾಕಲಾಗಿದ್ದು, ಇನ್ನು ಮುಂದೆ ವಾಹನ ಚಾಲಕರು ಅದನ್ನು ಗಮನಿಸಿ ವಾಹನ ಚಾಲನೆ ಮಾಡಬೇಕು.








