ಅಸ್ಸಾಂ: ಅಸ್ಸಾಂನಲ್ಲಿ ರೌದ್ರಾವತಾರ ತೋರಿದ್ದ ವರುಣ ಇನ್ನೂ ವರೆಗೂ ಶಾಂತನಾಗಿಲ್ಲ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದ್ದು, ಇನ್ನೂವರೆಗೂ ಪ್ರವಾಹದ ಪರಿಸ್ಥಿತಿ ಮುಂದುವರೆದಿದೆ. 15 ಕ್ಕೂ ಅಧಿಕ ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ಕಣ್ಣು ಹಾಯಿಸದಷ್ಟೂ ದೂರಕ್ಕೂ ಬರೀ ನೀರೇ ಕಾಣಿಸುತ್ತಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ರೈತರ ಜಮೀನುಗಳು ಹಾಳಾಗಿದ್ದು, ಕಂಗಾಲಾಗಿದ್ದಾರೆ. ಊರಿಗೆ ಊರೇ ಜಲಾವೃತಗೊಂಡು ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮನೆ ಕಳೆದುಕೊಂಡವರು ಹಾಗೂ ನದಿ ಪಾತ್ರದ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ನೆರೆಯಿಂದ ಅದೆಷ್ಟೋ ಮನೆಗಳು ಜಲಸಮವಾಗಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಬಾರಿಯ ನೆರೆಗೆ ರಾಜ್ಯದಲ್ಲಿ 110 ಮಂದಿ ಪ್ರಾಣ ಕಳೆದುಕೊಂಡಿದ್ರೆ, ಬ್ರಹ್ಮಪುತ್ರ ನದಿ ಪಾತ್ರದ 325 ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾಗಿವೆ. 1,95,689 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದು, ಒಟ್ಟು 23,591.82 ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಹಳ್ಳಕೊಳ್ಳಗಳು ಕೆರೆ ಕುಂಟೆ ನದಿ ಬಾವಿಗಳು ತುಂಬಿ ಹರಿಯುತ್ತಿವೆ. ಬ್ರಹ್ಮ ಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಷ್ಟಾದರು ವರುಣ ಮಾತ್ರ ಇನ್ನೂ ಶಾಂತನಾಗಿಲ್ಲ.









