ಕೋವಿಡ್-19 ವಿಶ್ವವನ್ನೇ ಬುಡಮೇಲು ಮಾಡಿರುವ, ಮಾಡುತ್ತಿರುವ ಹೆಮ್ಮಾರಿ. ಇದರ ಹೊಡೆತಕ್ಕೆ ಈಗಾಗಲೇ ಹಲವು ದೇಶಗಳು ಲಾಕ್ ಡೌನ್ ಆಗಿವೆ. ವಿಶ್ವಕ್ಕೆ ನಾವೇ ಸಾಮ್ರಾಟರು ಎಂದು ಮೆರೆಯುತ್ತಿದ್ದ ದೇಶಗಳು ಕೂಡ ಕೊರೊನಾಸುರನ ಭೀಕರತೆಗೆ ಬೆಚ್ಚಿಬಿದ್ದಿವೆ. ಇದಕ್ಕೆ ಆಸ್ಟ್ರೇಲಿಯಾ ದೇಶವು ಹೊರತಾಗಿಲ್ಲ.
ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ನಮ್ಮ ರಾಜ್ಯದ ಶಿವಮೊಗ್ಗದವರಾದ ಶುಭ್ರತ ರಾಮದಾಸ್ ಅವರು ತಮ್ಮದೇ ಆದ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ 8 ವರ್ಷಗಳಿಂದ ನೆಲೆಸಿದ್ದು, ಕೋವಿಡ್ 19 ಸೋಂಕನ್ನು ಎದುರಿಸಲು ಅಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ಕೊರೊನಾ ಬಗ್ಗೆ ಎಚ್ಚರವಹಿಸಿ, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಇರುವಂತೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ದೂರದ ಆಸ್ಟ್ರೇಲಿಯಾದಲ್ಲಿದ್ದರೂ ಭಾರತದ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ದೇಶಪ್ರೇಮ ಮೆರೆದಿದ್ದಾರೆ.








