ಇಹಲೋಕ ಯಾತ್ರೆ ಮುಗಿಸಿದ ಬಿಜೆಪಿಯ ಭೀಷ್ಮ ಉರಿಮಜಲು ಕೆ. ರಾಮ ಭಟ್
ಬಿಜೆಪಿಯ ಭೀಷ್ಮ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 92 ವರ್ಷ ವಯಸ್ಸಿನ ರಾಮ್ ಭಟ್ ಅವರು ಡಿಸೆಂಬರ್ 6 ಸೋಮವಾರ ಸಂಜೆ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಬಕ-ವಿಟ್ಲ ಸಮೀಪದ ಉರಿಮಜಲು ಎಂಬಲ್ಲಿನ ಅವಿಭಜಿತ ಹವ್ಯಕ ಕುಟುಂಬದಲ್ಲಿ ಜನಿಸಿದ ರಾಮ ಭಟ್ ಆರ್‌ಎಸ್‌ಎಸ್‌ನ ನಿಷ್ಠಾವಂತ ಸ್ವಯಂ ಸೇವಕರಾಗಿದ್ದು, ಪುತ್ತೂರನ್ನು ಹಿಂದುತ್ವದ ಭದ್ರಕೋಟೆ ಮಾಡಲು ಅಡಿಪಾಯ ಹಾಕಿದ್ದವರು.
ವೃತ್ತಿಯಲ್ಲಿ ವಕೀಲರಾಗಿದ್ದ ಅವರು ತಮ್ಮ ಜೀವಿತಾವಧಿಯಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. 2020 ರ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಪ್ರಧಾನಿ ಮೋದಿ ರಾಮಭಟ್ ಅವರಿಗೆ ಕರೆ ಮಾಡಿ ಆರ್ಶೀರ್ವಾದ ಮಾರ್ಗದರ್ಶನ ಪಡೆದಿದ್ದರು.
2008ರಲ್ಲಿ ಬಿಜೆಪಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿದ್ದಾಗ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.ಪಕ್ಷದೊಳಗೆ ತಪ್ಪುಗಳಾಗುತ್ತಿದೆ ಎಂದೆನಿಸಿದಾಗ ಅದನ್ನು ನೇರವಾಗಿ ವಿರೋಧಿಸಿ ಬಂಡಾಯ ಎದ್ದಿದ್ದು ನಂತರದ ದಿನಗಳಲ್ಲಿ ಪಕ್ಷದ ತತ್ವ ಸಿದ್ದಾಂತಗಳಿಗೆ ಕಾರ್ಯಕರ್ತರ ಧ್ವನಿಗಳಿಗೆ ಮಾನ್ಯತೆ ಸಿಗಲು ಕಾರಣವಾಗಿತ್ತು. ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಘೋಷಿಸಿದಾಗ ಮತ್ತೆ ಬಿಜೆಪಿ ಪಾಲಿನ ಮಾರ್ಗದರ್ಶಕ ರಾಗಿದ್ದರು.
ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ಪುತ್ತೂರಿನ ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಪರಿಕಲ್ಪನೆಯಲ್ಲಿ ರಾಮ್ ಭಟ್ ಅವರಿಂದ ಪ್ರಾರಂಭವಾದ ಸಂಸ್ಥೆ ವಿವೇಕಾನಂದ ವಿದ್ಯಾ ಸಂಸ್ಥೆ. ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಗಮನಾರ್ಹ ಬೆಳವಣಿಗೆಗೆ ಅವರ ಮಾರ್ಗದರ್ಶನವೇ ಕಾರಣವೆಂದರೆ ತಪ್ಪಾಗಲಾರದು. ದ.ಕ ಬಿಜೆಪಿಯ ಭೀಷ್ಮ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಪಾಲಾಗಿದ್ದಾಗ ರಾಷ್ಟ್ರ ರಾಜಕಾರಣದ ಭೀಷ್ಮ ಅಡ್ವಾಣಿಯವರಿಗೆ ಕನ್ನಡ ಭಾಷೆ ಕಲಿಸಿದ್ದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸಹಸ್ರಾರು ಮಕ್ಕಳ ಪಾಲಿಗೆ ಶಿಕ್ಷಣದ ಬೆಳಕಾಗಿದ್ದರಲ್ಲದೆ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಮಂಗಳವಾರ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ಅವರ ಪ್ರೀತಿಯ ವಿವೇಕಾನಂದ ಸಂಸ್ಥೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ಬಳಿಕ ಟೌನ್ ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ಡಾ| ಅಬ್ದುಲ್ ಕಲಾಂ ಅವರಂತೆ ನನ್ನ ಸಂಸ್ಥೆಯ ವಿದ್ಯಾರ್ಥಿಗಳ ಭವಿಷ್ಯವನ್ನು ನಾನು ಕಾಣಲಿಚ್ಛಿಸುತ್ತೇನೆ. ನಾನು ಮರಣವನ್ನಪ್ಪಿದರೆ ಸಂಸ್ಥೆಗೆ ರಜೆ ಘೋಷಿಸಿ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗಬಾರದು ಎಂಬ ಅವರ ಆಸೆಯಂತೆ ವಿವೇಕಾನಂದ ವಿದ್ಯಾ ಸಂಸ್ಥೆಗೆ ರಜೆ ಘೋಷಿಸಲಾಗಿಲ್ಲ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ರಾಮಭಟ್ ನೇತ್ರದಾನ ಮಾಡುವ ಮೂಲಕ ಮತ್ತೆ ಜಗತ್ತನ್ನು ನೋಡಲಿದ್ದಾರೆ. ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ವೈದ್ಯರು ರಾಮ್ ಭಟ್ ಅವರ ಕಣ್ಣುಗಳನ್ನು ಪಡೆದುಕೊಂಡಿದ್ದಾರೆ.








