ಮೈತ್ರಿ ಸರ್ಕಾರ ಪತನದ ನಂತರ ಸಂಕಷ್ಟದಲ್ಲಿರುವ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 12 ಮಂದಿ ಪಕ್ಷ ತೊರೆದು ಕಾಂಗ್ರೆಸ್ ಸೇರಲು ತಯಾರಾಗಿದ್ದಾರೆ. ಆಪರೇಷನ್ ಕಮಲದ ನಂತರ ಇದೀಗ ಆಪರೇಷನ್ ಹಸ್ತ ಜೆಡಿಎಸ್ ಗೆ ದೊಡ್ಡ ತಲೆ ನೋವಾಗಿ ಕಾಡುತ್ತಿದೆ.
ಕಾಂಗ್ರೆಸ್ ಪಕ್ಷ ಸೇರಲು ಕಾಯುತ್ತಿರುವ ಜೆಡಿಎಸ್ ನಾಯಕರು ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ನ ಹಿರಿಯ ನಾಯಕರು ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಹೇಳಿದ್ದು, ಕೆಲವು ನಾಯಕರು ಸದ್ಯಕ್ಕೆ ಪಕ್ಷದಲ್ಲೇ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನೂ ಕೆಲವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ನಂತರ ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.








