ಬೆಂಗಳೂರಿನ ಪಾರ್ಕ್ ವೊಂದರಲ್ಲಿ ಕಿರಿಕ್ ಬೆಡಗಿ ಮೇಲೆ ಗುಂಪೊಂದು ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಕವಿತಾ ರೆಡ್ಡಿ ಎಂಬ ಮಹಿಳೆ ಸಂಯುಕ್ತಾ ವಿರುದ್ಧ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಯುಕ್ತಾ ಹೆಗ್ಡೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಸಂಯುಕ್ತಾ ಬೆಂಬಲಕ್ಕೆ ಅನೇಕ ಸ್ಟಾರ್ ಗಳು ನಿಂತಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ ಸಂಯುಕ್ತಾ “ನಮ್ಮ ದೇಶದ ಭವಿಷ್ಯ ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಪ್ರತಿಫಲಿಸುತ್ತದೆ. ಆಗರ ಲೇಕ್ ನಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಪಹಾಸ್ಯ ಮಾಡಿದ್ದಾರೆ. ನನ್ನ ಬಳಿ ಹೆಚ್ಚು ಸಾಕ್ಷಿ ಇದೆ ಮತ್ತು ಹೆಚ್ಚಿನ ವಿಡಿಯೋಗಳಿವೆ. ಇದನ್ನು ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಬರೆದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು.ಇದೀಗ ಸಂಯುಕ್ತಾ ಮೇಲಾದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಸ್ಟಾರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಟಿ ಪಾರುಲ್ ಯಾದವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ನನಗೆ ಇದನ್ನು ಹೇಳಲು ಇಷ್ಟವಿಲ್ಲ, ಆದರೆ ಕೆಲವು ಮಹಿಳೆಯರು ನಿಜವಾದ ಅತ್ಯಾಚಾರಿಗಳಿಗಿಂತ ಹೆಚ್ಚು ಅಪರಾಧಿಗಳು. ಮಹಿಳೆಯರ ಮೇಲೆ ಹೀಗೆ ಹಲ್ಲೆ ಮಾಡಿದ ಕವಿತಾ ರೆಡ್ಡಿಯನ್ನು ಜೈಲಿಗೆ ಹಾಕಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವಿಚಾರವಾಗಿ ನಿರ್ದೇಶಕ ಸಿಂಪಲ್ ಸುನಿ ಅವರು ಸಹ ಟ್ವೀಟ್ ಮಾಡಿದ್ದು “ಸಂಯುಕ್ತ ಹೆಗಡೆಯವರ ತರಲೆ, ಕೀಟಲೆ ಕೆಲವೊಮ್ಮೆ ಅತಿ ಎನಿಸಬಹುದು. ಆದರೆ ಈ ವಿಷಯದಲ್ಲಿ ನ್ಯಾಯ ಸಿಗಬೇಕಾಗಿರುವುದು ಸಂಯುಕ್ತಾ ಅವರಿಗೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ” ಎಂದು ಬರೆದುಕೊಂಡಿದ್ದಾರೆ.
ಇತ್ತ ಮೇಘನಾ ಗಾಂವ್ಕರ್ ಸಹ “ಇದು ಸರಿಯಲ್ಲ, ನಟಿಯರು ಎಂಬ ಕಾರಣಕ್ಕಾಗಿ ಮತ್ತು ಅವರು ಏನು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಬೆದರಿಕೆ ಹಾಕುವುದು, ಅವಮಾನಿಸುವುದು ಮತ್ತು ಕಿರುಕುಳ ಕೊಡುವುದು. ಇದು ಸಮಾಜದ ಬೂಟಾಟಿಕೆ. ತುಂಬಾ ಬೇಸರವಾಗುತ್ತೆ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದು, ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೊಂದೆಡೆ ಸಂತೋಷ್ ಆನಂದ್ ರಾಮ್ ಅವರು ಸಹ ಸಂಯುಕ್ತಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಇಂದು ಸಂಯುಕ್ತ ಹೆಗಡೆ, ನಾಳೆ ನಮ್ಮ ಅಕ್ಕ ಪಕ್ಕದವರಿಗೆ, ನಮ್ಮ ಮನೆಯವರಿಗೆ ಇಂತದ್ದು ನಡೆಯಬಹುದು. ಈ ಮಹಿಳೆಗೆ ಶಿಕ್ಷೆ ಆಗಬೇಕು. ಇದು ಸರಿಯಲ್ಲ” ಎಂದು ಟ್ವೀಟ್ ಮಾಡಿದ್ದಾರೆ.