ಗೆಲುವಿನ ಲಯವನ್ನು ಕಳೆದುಕೊಳ್ಳುತ್ತಿದೆಯಾ ಚೆನ್ನೈ ಸೂಪರ್ ಕಿಂಗ್ಸ್
2020ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರದ್ಧ ಜಯ ಸಾಧಿಸಿದ್ದ ನಂತರ ಸಿಎಸ್ ಕೆ ತಂಡ ಗೆಲುವಿನ ಹಿಡಿತವನ್ನು ಕಳೆದುಕೊಂಡಿದೆ.
ರಾಜಸ್ತಾನ ರಾಯಲ್ಸ್ ವಿರುದ್ಧ ಸೋತ ಬಳಿಕ ತನ್ನ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋತಿದೆ. ಬಲಿಷ್ಠ ಹಾಗೂ ಅನುಭವಿ ತಂಡವಾಗಿರುವ ಸಿಎಸ್‍ಕೆ ತಂಡ ಯಾಕೆ ಎಡವಿ ಬೀಳುತ್ತಿದೆ ಎಂಬ ಪ್ರಶ್ನೆಗೆ ಕ್ರಿಕೆಟ್ ಪಂಡಿತರು ಮಹೇಂದ್ರ ಸಿಂಗ್ ಧೋನಿಯವರನ್ನು ಬೊಟ್ಟು ಮಾಡುತ್ತಿದ್ದಾರೆ.
ಹೌದು, ಧೋನಿಯ ನಿರ್ಧಾರದ ಬಗ್ಗೆ ಈಗ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕಳೆದ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದ್ದು. ಸವಾಲನ್ನು ಬೆನ್ನಟ್ಟುವ ತಾಕತ್ತೂ ಇದ್ರೂ ಕೂಡ ಸಿಎಸ್‍ಕೆಯ ಬ್ಯಾಟ್ಸ್ ಮೆನ್ ಗಳು ಒತ್ತಡಕ್ಕೆ ಸಿಲುಕುತ್ತಿದ್ದಾರೆ.
ಹಾಗೇ, ನಾಯಕ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ನಿರ್ಧಾರ. ಕಳೆದ ಎರಡು ಪಂದ್ಯಗಳಲ್ಲೂ ಧೋನಿ ಕೆಳ
ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಧೋನಿ 16ನೇ ಓವರ್ ನಲ್ಲಿ ಕ್ರೀಸ್‍ಗೆ ಆಗಮಿಸಿದ್ದರು. ಆಗ ಸಿಎಸ್‍ಕೆ ತಂಡದ ಗೆಲುವಿಗೆ ಬೇಕಾಗಿದ್ದು 26 ಎಸೆತಗಳಲ್ಲಿ 78 ರನ್ ಗಳು ಬೇಕಾಗಿದ್ದವು. ಧೋನಿ 12 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಈ ನಡುವೆ, ಸಿಎಸ್‍ಕೆ ತಂಡಕ್ಕೆ ಸುರೇಶ್ ರೈನಾ ಅವರ ಅನುಪಸ್ಥಿತಿ ಕಾಡುತ್ತಿದೆ. ಸಿಎಸ್‍ಕೆ ಮಾಲೀಕ ಶ್ರೀನಿವಾಸನ್ ಪ್ರಕಾರ ಸುರೇಶ್ ರೈನಾ ಜಾಗವನ್ನು ಋತುರಾಜ್ ಗಾಯಕ್ವಾಡ್ ತುಂಬುತ್ತಾರೆ ಅಂತ ಹೇಳಿದ್ದರು. ಆದ್ರೆ ಋತುರಾಜ್ ಗಾಯಕ್ವಾಡ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಮೂರನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವ ಬ್ಯಾಟ್ಸ್ ಮೆನ್ ನ ಕೊರತೆಯನ್ನು ಸಿಎಸ್‍ಕೆ ಎದುರಿಸುತ್ತಿದೆ.
ಇನ್ನು ಲಾಕ್ ಡೌನ್ ಟೈಮ್ ನಲ್ಲಿ ಸಿಎಸ್‍ಕೆ ಆಟಗಾರರಿಗೆ ಸರಿಯಾದ ಅಭ್ಯಾಸ ಕೂಡ ಆಗಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಸಿಎಸ್‍ಕೆ ಮತ್ತೆ ಗೆಲುವಿನ ಲಯಕ್ಕೆ ಮರಳಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಒಟ್ಟಿನಲ್ಲಿ ಸುರೇಶ್ ರೈನಾ ತಂಡದಿಂದ ಹೊರ ನಡೆದಿದ್ದು, ಮತ್ತೊಂದೆಡೆ ಹರ್ಭಜನ್ ಸಿಂಗ್ ಹಿಂದೇಟು ಹಾಕಿದ್ದನ್ನೆಲ್ಲಾ ನೋಡುವಾಗ ಸಿಎಸ್ ಕೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ.








