ಜಿ20 ಶೃಂಗಸಭೆಯಲ್ಲಿ ಪ್ರತಿಧ್ವನಿಸಿದ ಪ್ರಧಾನಿ ಮೋದಿ ಸಂದೇಶ
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಉಕ್ರೇನ್ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು ಕರೆ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ‘ಇದು ಯುದ್ಧದ ಸಮಯವಲ್ಲ’ ಎಂಬ ಸಂದೇಶವನ್ನು ಅವರೆಲ್ಲರೂ ಪ್ರತಿಪಾದಿಸಿದರು.
ಜಿ20 ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರು ಒಟ್ಟಾಗಿ ಘೋಷಣೆ ನೀಡುವ ವಾಡಿಕೆಯಿದೆ. ಅದರಂತೆ ಈ ಬಾರಿ ಜಿ20 ಅಧಿವೇಶನದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯ ರಾಷ್ಟ್ರಗಳು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದ ‘ಇದು ಯುದ್ಧದ ಸಮಯವಲ್ಲ’ ಎಂಬ ಹೇಳಿಕೆಯನ್ನೇ
ಜಂಟಿ ಘೋಷಣೆಯಾಗಿ ಅಂತಿಮ ಮಾಡುವುದರೊಂದಿಗೆ ಬಾಲಿ ಶೃಂಗಸಭೆ ಕೊನೆಗೊಂಡಿತು.
ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದಿಂದ ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗಿದ್ದು, ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಅವರಿಂದ ಜಿ20 ಅಧ್ಯಕ್ಷ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿಕೊಂಡರು.
ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಸ್ವೀಕರಿಸಿರುವ ಭಾರತವು, ಡಿಸೆಂಬರ್ 01 ರಿಂದ ಒಂದು ವರ್ಷದ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದೆ.
ಜಿ20 ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿ20 ಅಧ್ಯಕ್ಷ ಸ್ಥಾನವನ್ನು ಭಾರತವು ವಹಿಸಿಕೊಂಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾವು ಭಾರತದ ವಿವಿಧ ರಾಜ್ಯಗಳಲ್ಲಿ, ನಗರಗಳಲ್ಲಿ ಜಿ20 ಸಭೆಗಳನ್ನು ಆಯೋಜಿಸುತ್ತೇವೆ. ಒಟ್ಟಾಗಿ ನಾವು ಜಿ20 ಅನ್ನು ಜಾಗತಿಕ ಬದಲಾವಣೆಗೆ ವೇಗವಾಗಿ ಬೆಳೆಯುವಂತೆ ಮಾಡುತ್ತೇವೆ ಎಂದು ಹೇಳಿದರು.
ಜಿ-20 ಅಧ್ಯಕ್ಷ ಸ್ಥಾನದ ಥೀಮ್ ಆಗಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಹೈಲೈಟ್ ಮಾಡಿದ ಪ್ರಧಾನಿ ಮೋದಿ ಶಾಂತಿ ಮತ್ತು ಭದ್ರತೆಯಿಲ್ಲದೆ ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಆವಿಷ್ಕಾರದ ಲಾಭವನ್ನು ಪಡೆಯಲು ನಮ್ಮ ಮುಂದಿನ ಪೀಳಿಗೆಗೆ ಸಾಧ್ಯವಾಗುವುದಿಲ್ಲ. ಇಡೀ ಜಗತ್ತೇ ರಾಜಕೀಯ ಉದ್ವಿಗ್ನತೆ, ಆರ್ಥಿಕ ಮಂದಗತಿ, ಆಹಾರ ಮತ್ತು ಇಂಧನ ಬೆಲೆಗಳ ಏರಿಕೆ ಹಾಗೂ ಸಾಂಕ್ರಾಮಿಕದ ದುಷ್ಪರಿಣಾಮಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಭಾರತವು ಜಿ -20 ಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಜಿ -20 ಅನ್ನು ಪ್ರಪಂಚವೇ ಭರವಸೆಯಿಂದ ನೋಡುತ್ತಿದ್ದು, ಜಗತ್ತಿನ ಅಭಿವೃದ್ಧಿಯ ಕನಸಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಎಂಟರಿಂದ ಒಂಬತ್ತು ದೇಶಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದು, ಭಾರತೀಯ ವಲಸಿಗರೊಂದಿಗೆ ಕೂಡ ಸಂವಾದ ನಡೆಸಿದ್ದಾರೆ.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳನ್ನು ಜಿ-20 ಒಳಗೊಂಡಿದೆ.
ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷ್ಯಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದರು.








