ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆ. 24ರಂದು ಕೈಗೊಂಡಿದ್ದ ಪ್ರವಾಹ ಪರಿಸ್ಥಿತಿ ಪರಿಶೀಲನೆಗಾಗಿ ಪ್ರವಾಸ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ನಾಳೆಯಿಂದ ರವರೆಗೆ ಡಿ.ಕೆ.ಶಿವಕುಮಾರ್ ಬೆಳಗಾವಿ, ಚಿಕ್ಕೋಡಿ, ಜಮಖಂಡಿ, ಮುಧೋಳ ಹಾಗೂ ಬಾಗಲಕೋಟೆಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದರು. ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸ್ಥಳೀಯ ಕಾರ್ಯಕರ್ತರಿಗೆ ಕರೆ ನೀಡಲಾಗಿತ್ತು. ಆದರೆ ಇದೀಗ ದಿಢೀರ್ ಪ್ರವಾಸ ರದ್ದಾಗಿದೆ.
ಅನಿವಾರ್ಯ ಕಾರಣಗಳಿಂದ ಪ್ರವಾಸವನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕಳೆದ ಕೆಲದಿನಗಳಿಂದ ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಡಿಕೆಶಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಿರಂತರ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿರುವ ಶಿವಕುಮಾರ್ ಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ವೈದ್ಯರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ತಮ್ಮ ಸದಾಶಿವನಗರ ನಿವಾಸದಲ್ಲಿ ಮುಂದಿನ ಕೆಲ ದಿನ ವಿಶ್ರಾಂತಿ ಪಡೆಯಲಿದ್ದಾರೆ.
ವೈದ್ಯರು ಸಾಧ್ಯವಾದಷ್ಟು ದೀರ್ಘ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಶಿವಕುಮಾರ್ ಮುಂದಿನ ಮೂರ್ನಾಲ್ಕು ದಿನ ಸಾರ್ವಜನಿಕರ ಭೇಟಿ ಕಾರ್ಯಕ್ರಮ ಹಾಗೂ ಇತರೆ ಚಟುವಟಿಕೆಯಿಂದ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಇದೆ.









