ನವಗ್ರಹಗಳ ಸುತ್ತ ಕೇಂದ್ರದ ಕೃಷಿ ಕಾಯ್ದೆ..!
ಇದೇ ರೈತರ ವಿರೋಧಕ್ಕೆ ಕಾರಣ..!
ದೇಶದ್ಯಾಂತ ಈಗ ಹಸಿರು ಕ್ರಾಂತಿ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಈ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದೆ. ಹಾಗಿದ್ರೆ ಈ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಯಾಕೆ ಜಾರಿಗೆ ತಂದಿದೆ. ಇದಕ್ಕೆ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ ? ಹೊಸ ಕೃಷಿ ಕಾಯ್ದೆಯಿಂದ ರೈತರಿಗೆ ಆಗುವಂತಹ ಅನುಕೂಲಗಳು ಏನು ? ಅನಾನುಕೂಲತೆಗಳು ಏನು ? ಈ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಇನ್ನು ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ ಕಾಯ್ದೆಯನ್ನು ಮೊದಲ ಬಾರಿಗೆ 1966ರಲ್ಲಿ ಜಾರಿಗೆ ತರಲಾಗಿತ್ತು. ನಂತರ 20 ವರ್ಷಗಳ ಬಳಿಕ 1986ರಲ್ಲಿ ರೈತರ ಹಿತವನ್ನೇ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ಪ್ರಬಲವಾದ ತಿದ್ದುಪಡಿ ಮಾಡಲಾಗಿತ್ತು. ನಂತರ 2017ರಲ್ಲಿ ಎಪಿಎಂಸಿ ಮಾದರಿ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಈಗ ಅದೇ ಮಾದರಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿತರಲಾಗಿದೆ.
ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು. ಅದನ್ನು ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಬೆಳೆಯನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಜೊತೆಗೆ 2017ರ ಮಾದರಿ ಕಾಯ್ದೆ ಪ್ರಕಾರ ಆನ್‍ಲೈನ್ ಮೂಲಕ ಟೆಂಡರ್ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು. ಈಗ ಇದೇ ಕಾಯ್ದೆ 8ನೇ ಕಲಂಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ.
ಈ ಹಿಂದೆಯ ಕಾಯ್ದೆ ಪ್ರಕಾರ ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬೇಕಿತ್ತು. ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕೃಷಿ ನಿರ್ದೇಶನಾಲಯದ ಅನುಮತಿ ಅಗತ್ಯವಾಗಿತ್ತು. ಇದೀಗ ಎಂಪಿಎಂಸಿ ಒಳಗೆ ಅಥವಾ ಹೊರಗೆ ರೈತರ ಉತ್ನನ್ನಗಳನ್ನು ಖರೀದಿ ಮಾಡಲು ಯಾವುದೇ ಅನುಮತಿ ಅಗತ್ಯವಿಲ್ಲ.
ಬದಲಾವಣೆ ಏನು..?
ರೈತರು ತಮ್ಮ ಬೆಳೆಯನ್ನ ಎಪಿಎಂಸಿಗೆ ಬಂದು ಮಾರುವ ಅವಶ್ಯಕತೆ ಇಲ್ಲ.
ರೈತರು ತಮ್ಮ ಬೆಳೆ ಯಾರಿಗೆ ಬೇಕಾದ್ರು, ಎಲ್ಲಿ ಬೇಕಾದ್ರು, ಎಷ್ಟಕ್ಕೆ ಬೇಕಾದ್ರು ಮಾರಬಹುದು.
ಖಾಸಗಿ ಕಂಪನಿಗಳು ನೇರವಾಗಿ ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು
ಬೆಲೆ ವಿಚಾರದಲ್ಲಿ ಎಪಿಎಂಸಿಯ ಏಕಸ್ವಾಮ್ಯತೆ ವ್ಯವಸ್ಥೆಗೆ ಕಡಿವಾಣ
ರೈತರ ಮೇಲೆ ಲೈಸನ್ಸ್ ಇರುವ ಖರೀದಿದಾರರ ದಬ್ಬಾಳಿಕೆ ನಿಲ್ಲುತ್ತೆ
ರೈತರಿಗೆ ದೇಶವ್ಯಾಪ್ತಿ ಮುಕ್ತ ಮಾರುಕಟ್ಟೆ ಲಭ್ಯವಾಗುತ್ತೆ
ಈ ಕಾಯ್ದೆಯಿಂದ ದಲ್ಲಾಳಿಗಳ ಕಾಟ.. ಕಮಿಷನ್ ಸಂಕಷ್ಟ.. ತಪ್ಪುತ್ತೆ
ಇನ್ನು ರೈತರು ಎಪಿಎಂಸಿಗೆ ಎಂದು ನೂರಾರು ಕಿಲೋ ಮೀಟರ್ ಗಟ್ಟಲೇ ಸಾಲ ಮಾಡಿ ಬರುವ ಪರಿಸ್ಥಿತಿ ಇರೋದಿಲ್ಲ. ಖರೀದಿದಾರರೇ ರೈತರ ಬಳಿ ಹೋಗಿ ಬೆಳೆ ಖರೀದಿ ಮಾಡ್ತಾರೆ.
ಇಷ್ಟೆಲ್ಲಾ ಅನುಕೂಲಗಳಿದ್ದರೂ ಈ ಮಸೂದೆಗೆ ರೈತರ ವಿರೋಧ ಯಾಕೆ ಅನ್ನೋದನ್ನ ನೋಡೊದಾದ್ರೆ.
ಸರ್ಕಾರ ಹೇಳುವಂತೆ ಬಹುರಾಷ್ಟ್ರೀಯ ಕಂಪನಿ, ಬಂಡವಾಳಶಾಹಿ ಕಂಪನಿಗಳು ರೈತರಿಂದ ಬೆಳೆ ಖರೀದಿ ಮಾಡಬಹುದು, ಆದ್ರೆ ಬೆಲೆ ನಿಗದಿಯಲ್ಲಿ ರೈತನ ಮಾತು ನಡೆಯಲ್ಲ, ಬೆಲೆ ನಿಗಧಿ ಮಾಡೋ ಅಧಿಕಾರ ರೈತನಿಗೆ ಸಿಗೋಲ್ಲ.
ಹಾಗೇ ಎಂಪಿಎಂಸಿ ವ್ಯವಸ್ಥಯನ್ನು ಹಾಳು ಮಾಡುತ್ತೆ. ಜೊತೆಗೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರೋ ಎಷ್ಟೋ ಮಂದಿ ನಿರುದ್ಯೋಗಿಗಳಲಾಗುತ್ತಾರೆ.
ರೈತರಿಂದ ಬೆಲೆ ಖರೀದಿ ಮಾಡುವ ಕಂಪನಿಗಳು ಅಥವಾ ಬಂಡವಾಳಶಾಹಿಗಳು ರೈತರಿಗೆ ತಕ್ಷಣ ಹಣ ಕೊಡ್ತಾರೆ ಅನ್ನೋ ನಂಬಿಕೆ ಇಲ್ಲ.
ಅಲ್ಲದೆ ರೈತರಿಂದ ಕಂಪನಿಗಳೇ ನೇರವಾಗಿ ಬೆಳೆ ಖರೀದಿ ಮಾಡಿಕೊಂಡ್ರೆ ಸಣ್ಣ ವ್ಯಾಪಾರಿಗಳು ಬೀದಿಗೆ ಬೀಳ್ತಾರೆ.
ರಾಜ್ಯದ ಗ್ರಾಹಕ ಮಾರುಕಟ್ಟೆ ಕಾರ್ಪೋರೇಟ್ ಮಯವಾಗಿಬಿಡುತ್ತೆ. ಇದು ಮುಂದಿನ ದಿನಗಳಲ್ಲಿ ಅಪಾಯಕಾರಿ ಕೂಡ.
ನಮ್ಮ ರಾಜ್ಯದ ಬಹಳಷ್ಟು ರೈತರು ತಮಗೆ ಬೇಕಾದಾಗ ವ್ಯಾಪಾರಸ್ಥರಿಂದ ಕೈಗಡದ ರೂಪದಲ್ಲಿ ಸಾಲವನ್ನು ಪಡೆದಿರುತ್ತಾರೆ. ರೈತರು ಪಡೆದಿರುವ ಸಾಲಕ್ಕೆ ರೈತರಿಂದ ಕೆಲವು ಬಾರಿ ವ್ಯಾಪಾರಸ್ಥರು ಬಡ್ಡಿಯನ್ನೂ ವಿಧಿಸುವುದಿಲ್ಲ.
ಬದಲಿಗೆ ಎಪಿಎಂಸಿಗಳಲ್ಲಿನ ತಮ್ಮ ಅಂಗಡಿಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಷರತ್ತು ಇರುತ್ತದೆ. ಹೊಸ ಕಾಯಿದೆಯಿಂದ ರೈತರು ಹಾಗೂ ವ್ಯಾಪಾರಸ್ಥರ ಮಧ್ಯದ ಕೊಂಡಿ ಸಂಪೂರ್ಣವಾಗಿ ನಾಶವಾಗುತ್ತದೆ.
ಇದಲ್ಲದೇ ಸರ್ಕಾರದಿಂದ ರೈತರಿಗೆ ಸಿಗುವ ಬೆಂಬಲ ಬೆಲೆ ಈ ಮಸೂದೆ ಕಿತ್ತುಕೊಳ್ಳುತ್ತೆ ಅನ್ನೋದು ಮಸೂದೆಯನ್ನು ವಿರೋಧಿಸುವವರ ವಾದವಾಗಿದೆ.