ಪುತ್ತೂರು ನೆಲ್ಯಾಡಿಯ ಮಣ್ಣಗುಂಡಿಯಲ್ಲಿ ಕಾಡಾನೆಗಳ ಹಾವಳಿ..!
ಕಾಡಂಚಿನಲ್ಲಿ ವಾಸವಾಗಿರುವ ಜನರಿಗೆ ಕಾಡು ಪ್ರಾಣಿಗಳ ಹಾವಳಿ ಮಮೂಲಿ. ಹೀಗಾಗಿ ಪ್ರತಿ ದಿನವೂ ಭೀತಿಯಿಂದಲೇ ಜೀವನ ಸಾಗಿಸಬೇಕಾಗುತ್ತದೆ. ಇದೀಗ ಅಂತಹುದ್ದೇ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಬಳಿಯ ಮಣ್ಣಗುಂಡಿಯ ನಿವಾಸಿಗಳು.
ಮೊದಲೇ ಮಣ್ಣಗುಂಡಿ ಕಾಡಾಂಚಿನ ಪ್ರದೇಶ, ಇಲ್ಲಿ ಹತ್ತಾರು ಕುಟುಂಬಗಳು ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಅದೇ ರೀತಿ ಇಲ್ಲಿನ ಜನರಿಗೆ ಸಣ್ಣ ಪುಟ್ಟ ಕಾಡು ಪ್ರಾಣಿಗಳು ತೊಂದರೆ ಕೊಡುತ್ತಿರುವುದು ಮಾಮೂಲಿ. ಆದ್ರೆ ಈಗ ಕಾಡಾನೆಗಳ ಹಾವಳಿಯಿಂದಾಗಿ ಭಯದಿಂದಲೇ ಜೀವನ ಸಾಗಿಸಬೇಕಾಗಿದೆ. ಇಷ್ಟು ದಿನ ತೋಟಕ್ಕೆ ಬಂದು ತನ್ನ ಪುಂಡಾಟ ನಡೆಸುತ್ತಿದ್ದ ಕಾಡಾನೆಗಳು ಈಗ ಮನೆಯ ಅಂಗಳಕ್ಕೂ ಕಾಲಿಟ್ಟಿವೆ. ಇದ್ರಿಂದ ಇಲ್ಲಿನ ಜನರು ಓಡಾಡಲು ಭಯಗೊಳ್ಳುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಮಣ್ಣಗುಂಡಿಯ ಸಮೀಪದ ಪೆರಿಯಶಾಂತಿಯ ಬಳಿಯೂ ಕಾಡಾನೆ ರಸ್ತೆಗೂ ಇಳಿದಿತ್ತು. ಇದಕ್ಕೂ ಮೊದಲು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲೂ ಈ ಕಾಡಾನೆಗಳ ಗುಂಪು ಜನರನ್ನು ಆತಂಕಕ್ಕೀಡು ಮಾಡುತ್ತಿತ್ತು.
ಒಂದು ಕಡೆ ಭಯ, ಹೆದರಿಕೆ ಮತ್ತೊಂದು ಕಡೆ ರೈತರು ಬೆಳೆದಿರುವ ಬಾಳೆ, ತೆಂಗು, ಅಡಿಕೆ ಮರ-ಗಿಡಗಳನ್ನು ಈ ಕಾಡಾನೆಗಳು ಧ್ವಂಶ ಮಾಡುತ್ತಿವೆ. ಒಟ್ಟಿನಲ್ಲಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.








