ಭಾರತ್ ಬಂದ್ ಅಪಡೇಟ್ಸ್…ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ : ‘ಕೈ’ ಕಪ್ಪುಪಟ್ಟಿ, ಮೋದಿ ಅಣಕು ಶವಯಾತ್ರೆ..!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರೆಲ್ಲರು ದೈನಂದಿನ ಚಟುವಟಿಕೆಗಳಲ್ಲಿ ಎಂದಿನಂತೆ ತೊಡಗಿದ್ದಾರೆ. ಬಸ್ ಸಂಚಾರ ಎಂದಿನಂತಿದೆ. ಕೆಲವೇ ಕೆಲವು ಭಾಗಗಳಲ್ಲಿ ರೈತರು ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನಗಳ ಸಂಚಾರ ಎಂದಿನಂತಿದೆ. ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ವ್ಯಾಪಾರ ವಹಿವಾಟು , ತರಕಾರಿ, ಹೂವು-ಹಣ್ಣು ಮಾರಾಟವೂ ಸಹಜವಾಗಿಯೇ ಇದೆ.
ಇತ್ತ ಬಂದ್ ಗೆ ಕಾಂಗ್ರೆಸ್ ನಾಯಕರು ಬೆಂಬಲಿಸಿ ಅನ್ನದಾತರ ಪರ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗ ತೋಳಿಗೆ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ, ಸಿದ್ದರಾಮಯ್ಯ, ಪರಮೇಶ್ವರ, ಎಸ್.ಆರ್. ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ರು.
‘ಯುವರತ್ನ’ ರಿಲೀಸ್ ಗೆ ಡೇಟ್ ಫಿಕ್ಸ್ : ಅಪ್ಪು ಅಭಿಮಾನಿಗಳು ಫುಲ್ ಖುಷ್..!
ಹುಬ್ಬಳ್ಳಿ: ಇತ್ತ ಹುಬ್ಬಳ್ಳಿಯಲ್ಲೂ ಬಂದ್ ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿಲ್ಲ. ಇತ್ತ ಕೆಲ ರೈತ ಹೊರಾಟಗಾರರು ಹೊಸುರು ಡಿಪೋ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಚಿಕ್ಕಮಗಳೂರು: ಇನ್ನೂ ಭಾರತ್ ಬಂದ್ ಬೆಂಬಲಿಸಿ ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ ನಡೆದಿದೆ. ನಗರದ ಹನುಮಂತಪ್ಪ ವೃತ್ತದಲ್ಲಿ ಬಿಎಸ್ಪಿ, ಸಿಪಿಐಎಂಎಲ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಕೊಪ್ಪಳ: ಕೊಪ್ಪಳದಲ್ಲೂ ಪ್ರತಿಭಟನೆ ರಂಗೇರಿತ್ತು. ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅಣಕು ಶವಯಾತ್ರೆ ಮಾಡಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಭಾರತ್ ಬಂದ್ ಬೆಂಬಲಿಸಿ ಬಾಗಲಕೋಟೆಯಲ್ಲಿಯೂ ಪ್ರತಿಭಟನೆ ನಡೆದಿದೆ. ಹುನಗುಂದ ತಾಲ್ಲೂಕಿನ ಕಮತಗಿ ಸೇತುವೆ ಮೇಲೆ ರಸ್ತೆ ತಡೆದು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 13 ದಿನಗಳಿಂದಲೂ ಅನ್ನದಾತರು ಪ್ರತಿಭಟನೆ ನಡೆಸಿದ್ದಾರೆ. ಇದೀಗ ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಆದರೆ ರೈತರ ಆಗ್ರಹಕ್ಕೆ ಕೇಂದ್ರ ಸರ್ಕಾರ ಮಣಿಯದ ಹಿನ್ನೆಲೆ ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಭಾಗಶಃ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.