ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿಗೆ ಮುಹೂರ್ತ ಫಿಕ್ಸ್..!
ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ ಫಿಕ್ಸ್ ಆಗಿದೆ. ಫೆಬ್ರವರಿ 5ರಿಂದ ಮಾರ್ಚ್ 28ರವರೆಗೆ ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ತಂಡಗಳು ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ-20 ಸರಣಿಗಳನ್ನು ಆಡಲಿವೆ.
ಕೋವಿಡ್ 19ನಿಂದಾಗಿ ಈ ಸರಣಿಗಳು ಭಾರತದ ಮೂರು ಮೈದಾನದಲ್ಲಿ ನಡೆಯಲಿವೆ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ.
ಅದೇ ರೀತಿ ಇನ್ನುಳಿದ ಎರಡು ಟೆಸ್ಟ್ ಹಾಗೂ ಐದು ಟಿ-ಟ್ವೆಂಟಿ ಪಂದ್ಯಗಳು ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಅನ್ನೋ ಹೆಗ್ಗಳಿಕೆಯನ್ನು ಪಡೆದಿರುವ ಗುಜರಾತ್‍ನ ಮೊಟೆರಾ ಮೈದಾನದಲ್ಲಿ ನಡೆಯಲಿದೆ.
ಮಾರ್ಚ್ 23ರಿಂದ ನಡೆಯಲಿರುವ ಮೂರು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
ಇಂಗ್ಲೆಂಡ್ ಕ್ರಿಕೆಟ್ ತಂಡ ಜನವರಿ 27ರಂದು ಭಾರತಕ್ಕೆ ಆಗಮಿಸಲಿದೆ. ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ಕೊಲಂಬೊದಿಂದ ನೇರವಾಗಿ ಚೆನ್ನೈಗೆ ಬರಲಿದೆ.
ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 5 ಮತ್ತು ಫೆಬ್ರವರಿ 13ರಿಂದ ಚೆನ್ನೈನಲ್ಲಿ ನಡೆಯಲಿದೆ. ಅದೇ ರೀತಿ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 24 ಮತ್ತು ಮಾರ್ಚ್ ನಾಲ್ಕರಿಂದ ಮೊಟೆರಾ ಮೈದಾನದಲ್ಲಿ ನಡೆಯಲಿದೆ.
ಇನ್ನು ಮಾರ್ಚ್ 12, 14, 16, 18 ಮತ್ತು 20ರಂದು ಮೊಟೆರಾ ಮೈದಾನದಲ್ಲಿ ಟಿ-20 ಪಂದ್ಯಗಳು ನಡೆಯಲಿವೆ.
ಹಾಗೇ ಮಾರ್ಚ್ 23, 26 ಮತ್ತು 28ರಂದು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.
ಕೋವಿಡ್-19 ಆತಂಕದಿಂದ ಈ ಸರಣಿಗೆ ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಡೆಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.








