ನವದೆಹಲಿ: ಸ್ಥಳೀಯ ನಾಯಕರ ನಡುವಿನ ಭಿನ್ನಮತದಿಂದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಅದರ ಮುಂದುವರೆದ ಸರದಿ ರಾಜಸ್ಥಾನದಲ್ಲಿ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೂಡ ಮಾಜಿ ಡಿಸಿಎಂ ಸಚಿನ್ ಪೈಲಟ್‍ರ ಬಂಡಾಯದಿಂದ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆಲ್ಲಾ ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲ ಕಾರಣ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ.
ಇದರ ಬೆನ್ನಲ್ಲೇ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ರಾಜಸ್ಥಾನದ ಬೆಳವಣಿಗೆ ನೋಡಿದರೆ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್-ಶಿವಸೇನೆ-ಎನ್‍ಸಿಪಿ ನೇತೃತ್ವದ ಮೈತ್ರಿ ಸರ್ಕಾರವೂ ಕೂಡ ಹೆಚ್ಚು ದಿನ ಬಾಳುವುದಿಲ್ಲ ಎಂದು ಹೇಳಿಕೆ ನೀಡಿರುವುದು ಮುಂದೆ ನಡೆಯುವ ರಾಜಕೀಯ ಸ್ಥಿತ್ಯಂತರದ ಮುನ್ಸೂಚನೆಯಾ ಎಂಬ ಗುಮಾನಿ ಎದ್ದಿದೆ.
ಮಹಾರಾಷ್ಟ್ರದ ಅಘಾಡಿ ಸರ್ಕಾರದಲ್ಲೀ ಎಲ್ಲವೂ ಸರಿಯಿಲ್ಲ ಎನ್ನುವುದು ಆಗಾಗ ಸಾಬೀತಾಗುತ್ತಲೇ ಇದೆ. ಸರ್ಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಿಎಂ ಉದ್ಧವ್ ಠಾಕ್ರೆ ಹರಸಾಹಸ ನಡೆಸುತ್ತಲೇ ಇದ್ದಾರೆ. ಎರಡು ದಿನಗಳ ಹಿಂದಷ್ಟೇ ಎನ್‍ಸಿಪಿ ಮುಖ್ಯಸ್ಥ ಶರತ್ ಪವಾರ್ ಜತೆ ಸುಧೀರ್ಘ ಚರ್ಚೆ ನಡೆಸಿರುವುದು ಮುಂದೆ ಆಗಬಹುದಾದ ಗೊಂದಲಗಳ ಬಗೆಹರಿಸುವ ಪ್ರಯತ್ನ ಎನ್ನಲಾಗಿದೆ.
ಮಧ್ಯ ಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಪತನಗೊಳಿಸುವಲ್ಲಿ ಬಿಜೆಪಿ ವಹಿಸಿದ ಪ್ರಮುಖ ಪಾತ್ರ ಗೊತ್ತಿರುವ ವಿಚಾರವೇ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯತಂತ್ರದಂತೆ ಎಲ್ಲವೂ ನಡೆದು ಹೋಯಿತು. ಅಲ್ಲಿನ ಕಾಂಗ್ರೆಸ್ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾರರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಮೂಲಕ ಸರ್ಕಾರ ಪತನಕ್ಕೆ ಅಮಿತ್ ಶಾ ಮುಹೂರ್ತ ಇಟ್ಟಿದ್ದರು. ಸತತ ಎರಡು ವಾರಗಳ ಹಗ್ಗ ಜಗ್ಗಾಟದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಕಮಲನಾಥ್ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಪತನಗೊಂಡಿತು.
ಈಗ ರಾಜಸ್ಥಾನದಲ್ಲಿ ನಡೆಯುತ್ತಿರುವುದೂ ಇದೆ. ಹಿರಿಯ ಹಾಗೂ ಯುವ ನಾಯಕರ ನಡುವಿನ ಸಂಘರ್ಷ ಸರ್ಕಾರದ ಅಸ್ಥಿತ್ವವನ್ನೇ ಅಲ್ಲಾಡಿಸುವಂತೆ ಮಾಡಿದೆ. ಡಿಸಿಎಂ ಹುದ್ದೆಯಿಂದ ಸಚಿನ್ ಪೈಲಟ್ ಕಿತ್ತು ಹಾಕಿದ್ದಲ್ಲದೆ, ಕಾಂಗ್ರೆಸ್‍ನಿಂದ ವಜಾ ಮಾಡಲಾಗಿದೆ.
ಈ ಬೆಳವಣಿಗೆಗಳ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಹೇಳಲಾಗುತ್ತಿದ್ದರೂ, ಸಚಿನ್ ಪೈಲಟ್ ಬಿಜೆಪಿಯತ್ತ ವಾಲಿದರೆ ಇದಕ್ಕೆ ಪುಷ್ಟಿ ಸಿಕಕಂತಾಗುತ್ತದೆ. ಆದರೆ, ತೆರೆಯ ಹಿಂದೆ ಬಿಜೆಪಿ ಸರ್ಕಾರವನ್ನು ಬೀಳಿಸಲು ಕುತಂತ್ರ ನಡೆಸಿದೆ ಎನ್ನುವುದು ಸ್ವತಃ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪವಾಗಿದೆ.
ನಂತರ ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಮಹಾರಾಷ್ಟ್ರ ರಾಜಕೀಯದಲ್ಲೂ ಕಂಪನ ಸೃಷ್ಟಿಸಿದೆ. ಇದು ಮುಂದೆ ಎಲ್ಲಿಗೆ ಹೋಗಿ ತಲುಪಲಿದೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.








