ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಹೇಳಿ ಹಲವು ದಿನಗಳೇ ಕಳೆದಿವೆ. ಹೀಗಾಗಿ ಬೆಂಗಳೂರು ನಗರದ ಯಾವ ಮೂಲೆಯಲ್ಲೂ ಕೊರೊನಾ ಸೋಂಕು ಇಲ್ಲ ಎಂಬುದೇ ಇಲ್ಲವೇನೋ ಅಂತಾಗಿದೆ.
ಪೂರ್ತಿ ಬೆಂಗಳೂರನ್ನು ಕೊರೊನಾ ತನ್ನ ತೆಕ್ಕೆಗೆ ಎಳೆದುಕೊಂಡ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರದಿಂದ 2 ಸಾವಿರವರೆಗೆ ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿವೆ. ಹೀಗಾಗಿಯೇ ಸರ್ಕಾರ ಕೊರೊನಾ ಚೈನ್ ಗೆ ಬ್ರೇಕ್ ಹಾಕಲು ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಿದೆ.
ಆದರೆ ಸದ್ಯದ ಮಟ್ಟಿಗೆ ಬೆಂಗಳೂರಿನ 198 ಬಿಬಿಎಂಪಿ ವಾರ್ಡ್ ಗಳ ಪೈಕಿ ಎರಡು ವಾರ್ಡ್ ಗಳು ಸೇಫ್ ಎನ್ನಲಾಗುತ್ತಿವೆ. ಕಾರಣ ವಾರ್ಡ್ ಗಳಲ್ಲಿ 50ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಅವುಗಳೆಂದರೆ 198ನೇ ವಾರ್ಡ್ ಹೆಮ್ಮಿಗೆಪುರ ಹಾಗೂ 196ನೇ ವಾರ್ಡ್ ಅಂಜನಾಪುರ. ಐದು ದಿನ ಹಿಂದೆ 81ನೇ ವಾರ್ಡ್ ವಿಜ್ಞಾನ ನಗರದಲ್ಲೂ ಐವತ್ತಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಗಳು ದಾಖಲಾಗಿವೆ.

ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದರೆ ಬೆಂಗಳೂರಿನ 196 ವಾರ್ಡ್ ಗಳು ಸಂಪೂರ್ಣ ಕೊರೊನಾ ರಣಕೇಕೆಯ ಯಮಪಾಶದಲ್ಲಿ ಸಿಲುಕಿವೆ. ಹೀಗಾಗಿ ಇಡೀ ಬೆಂಗಳೂರು ಕೊರೋನಾ ಹಬ್ ಆಗಿ ಪರಿವರ್ತನೆ ಆಗುತ್ತಿದ್ದು, ಎಲ್ಲೂ ಸೇಫ್ ಅಲ್ಲ, ಯಾವ ಏರಿಯಾವೂ ಕೊರೋನಾ ಫ್ರೀ ಅಲ್ಲ ಎಂಬಂತಾಗಿದೆ. ಯಾವುದಕ್ಕೂ ಬೆಂಗಳೂರಿಗರೇ ಹುಷಾರ್.. ಹುಷಾರ್..








