ಬೆಂಗಳೂರು: ಮಂಗಳವಾರ ರಾತ್ರಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಕಠಿಣ ಲಾಕ್ಡೌನ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಆದರೆ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆ ವ್ಯಾಪ್ತಿಗೆ ಬರುವ ಕೈಗಾರಿಕೆಗಳು ಹಾಗೂ ಕಾರ್ಮಿಕರಿಗೆ ವ್ಯವಸ್ಥೆ ಏನು ಎಂಬ ಪ್ರಶ್ನೆ ಎದುರಾಗಿದೆ.
ಕನಕಪುರ ಮುಖ್ಯರಸ್ತೆಯಲ್ಲಿ ಸಾವಿರಾರು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಮೈಸೂರು ರಸ್ತೆಯಲ್ಲಿರುವ ಕೈಗಾರಿಕೆಗಳು, ಕೋಲಾರ-ಚೆನ್ನೈ ರಸ್ತೆಯಲ್ಲಿರುವ ಕೈಗಾರಿಕೆಗಳಿಗೆ ಎರಡು ಜಿಲ್ಲೆಗಳ ಲಾಕ್ಡೌನ್ ಎಫೆಕ್ಟ್ ಮಾಡುವ ಸಾಧ್ಯತೆ ಇದೆ.
ರಾಮನಗರ, ಕೋಲಾರ ಜಿಲ್ಲೆಗಳ ಗಡಿ ಭಾಗದಲ್ಲಿರುವ ಸಾವಿರಾರು ಕೈಗಾರಿಗಳಿಗೆ ನಿತ್ಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಕಾರ್ಮಿಕರು ಹಾಗೂ ಅಧಿಕಾರಿಗಳು ಪ್ರತಿನಿತ್ಯ ಬಂದು ಹೋಗುತ್ತಾರೆ. ನಾಳೆಯಿಂದ ಲಾಕ್ಡೌನ್ ಆದ್ರೆ, ಬೆಂಗಳೂರು ನಗರ ಪ್ರವೇಶಿಸುವ ಗಡಿಗಳು ಬಂದ್ ಆಗಲಿವೆ. ನಗರದಲ್ಲಿ ಬಸ್ ಸೇರಿದಂತೆ ವಾಹನ ಸಂಚಾರವೂ ಸ್ಥಗಿತಗೊಳ್ಳುವುದರಿಂದ ಕೈಗಾರಿಕೆಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಪರದಾಡಬೇಕಾಗುತ್ತದೆ.

ಲಾಕ್ಡೌನ್ ವೇಳೆ ವಾರಗಟ್ಟಲೇ ಕಾರ್ಮಿಕರನ್ನು ಕಾರ್ಖಾನೆಗಳಲ್ಲೇ ಉಳಿಸಿಕೊಳ್ಳುವುದು ಹೊರೆಯಾಗಲಿದೆ. ಊಟ ವಸತಿ, ಆರೋಗ್ಯ ಚಿಕಿತ್ಸೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕೈಗಾರಿಕೆಗಳು ಮಾಡಬೇಕಾಗುತ್ತದೆ. ಹೀಗಾಗಿ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕೈಗಾರಿಕೆಗಳಿಗೆ ಲಾಕ್ಡೌನ್ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಲಾಕ್ಡೌನ್ ಮಾರ್ಗಸೂಚಿ ರಚಿಸಲಾಗುತ್ತಿದೆ. ಮಾರ್ಗಸೂಚಿಯಲ್ಲಿ ಈ ತೊಂದರೆಗೆ ಪರಿಹಾರ ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.








