ಶಿವಸೇನೆ ಅಧಿಕಾರಕ್ಕಾಗಿ ಹುಟ್ಟಿಲ್ಲ; ಅಧಿಕಾರ ಶಿವಸೇನೆಗಾಗಿ ಹುಟ್ಟಿದೆ – ಸಂಜಯ್ ರಾವತ್
ಶಿವಸೇನೆ ಅಧಿಕಾರಕ್ಕಾಗಿ ಹುಟ್ಟಿಲ್ಲ, ಅಧಿಕಾರ ಶಿವಸೇನೆಗಾಗಿ ಹುಟ್ಟಿದೆ. ಮತ್ತೊಮ್ಮೆ ಸ್ವಂತ ಬಲದಿಂದ ಕೆಲಸ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಗುಡುಗಿದ್ದಾರೆ.
ಉದ್ಧವ್ ಠಾಕ್ರೆ ರಾಜೀನಾಮೆಯೊಂದಿಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ(MVA) ಸರ್ಕಾರ ಪತನವಾಗಿದೆ. ನಿನ್ನೆ ಸಂಜೆ ರಾಜ್ಯಪಾಲ ಭಗಂತ್ ಸಿಂಗ್ ಕೊಶ್ಯಾರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ. ಪ್ರತಿಯೊಬ್ಬರೂ ಉದ್ಧವ್ ಠಾಕ್ರೆ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ರಾಜ್ಯದ ಪ್ರತಿ ಜಾತಿ, ಧರ್ಮದ ಜನರು ಅವರನ್ನು ಒಪ್ಪಿಕೊಂಡಿದ್ದರು. ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು ರಾಜಿನಾಮೆ ಪತ್ರ ಸಲ್ಲಿಸುವಾಗ ಭಾವುಕರಾಗಿದ್ದೆವು ಎಂದು ರಾವತ್ ಹೇಳಿದ್ದಾರೆ.
ಸುಮಾರು 10 ದಿನಗಳ ಹೋರಾಟ, ಆರೋಪ, ಪ್ರತ್ಯಾರೋಪಗಳು ಮತ್ತು ಭಾವನಾತ್ಮಕ ಮನವಿಗಳ ಬಳಿಕ, ಉದ್ಧವ್ ಠಾಕ್ರೆ ಅವರು ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿಗದಿಯಾಗಿದ್ದ ವಿಶ್ವಾಸ ಮತಯಾಚನೆಗೂ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು
ಇನ್ನು ತಮಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ನಾಳೆ ಜಾರಿ ನಿರ್ದೇಶನಾಲಯ ಕಚೇರಿಗೆ ಹೋಗುತ್ತೇನೆ ಎಂದಿದ್ದಾರೆ. ಪತ್ರ ಚೌಲ್ ಭೂ ಹಗರಣ ಕೇಸಿಗೆ ಸಂಬಂಧಪಟ್ಟಂತೆ ಜುಲೈ 1ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಂಜಯ್ ರಾವತ್ ಗೆ ಜಾರಿ ನಿರ್ದೇಶನಾಲಯ ಎರಡು ಭಾರಿ ಸಮನ್ಸ್ ಜಾರಿ ಮಾಡಿದೆ.








