ಬೆಂಗಳೂರು: ರಾಜ್ಯದಲ್ಲಿ ಕೊರೊನ ಸೋಂಕಿಗೆ ಕಡಿವಾಣ ಬೀಳದ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯುವುದಕ್ಕೆ ಕಿರುತೆರೆ ಸ್ಟಾರ್ ನಿರ್ದೇಶಕ ಟಿ.ಎನ್ ಸೀತಾರಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಲೆಗಳನ್ನು ಆರಂಭಿಸುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ. ಒಂದು ವರ್ಷ ಪ್ರಮೋಟ್ ಕೊಟ್ಟರೆ ಸಾಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಸಂಬಂಧ ಫೇಸ್ಬುಕ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಟಿ.ಎನ್ ಸೀತಾರಾಮ್, ಇಂಥಾ ಕೊರೊನಾ ಅಬ್ಬರದಲ್ಲಿ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೋನಾ ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ ತಂದೆ ತಾಯಿಗಳು ಆತಂಕ, ಹಿಂಸೆಪಡಲು ಶುರು ಮಾಡುತ್ತಾರೆ.
ಹೆಚ್ಚು ಆದರಂತೂ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸಬೇಕಾಗುತ್ತದೆ. ಬೇಕಾ ಇದೆಲ್ಲಾ ಎಂದು ಪ್ರಶ್ನಿಸಿರುವ ಅವರು, ಒಂದು ವರ್ಷ ಮಕ್ಕಳಿಗೆ ಸುಮ್ಮನೆ ಪ್ರಮೋಷನ್ ಕೊಟ್ಟರೆ ನಷ್ಟವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಹೀಗಾಗಿ ಸದ್ಯಕ್ಕೆ ಶಾಲೆ ಶುರುಮಾಡುವುದು ಬೇಡ ಎಂದು ಆಗ್ರಹಿಸಿದ್ದಾರೆ.