ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ಸ್ಟೇಷನನ್ನು ಶ್ರೀ ಸಿದ್ದಾರೂಢ ಸ್ವಾಮೀಜಿ ನಿಲ್ದಾಣ ಎಂದು ನಾಮಕರಣ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ದೈವ ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಗೃಹ ಇಲಾಖೆ ಆದೇಶ ನೀಡಿ ರಾಜ್ಯ ಕಂದಾಯ ಇಲಾಖೆಗೆ ಆದೇಶದ ಪ್ರತಿ ರವಾನೆ ಮಾಡಿದೆ.
ಸಿದ್ದರೂಢ ಸ್ವಾಮೀಜಿ ಹೆಸರು ನಾಮಕರಣ ಮಾಡಿ ಆದೇಶ ಹೊರಡಿಸಿದ್ದಕ್ಕೆ ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಪಿಯೂಷ್ ಗೋಯಲ್‍ಗೆ ಸಚಿವ ಸುರೇಶ್ ಅಂಗಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ ಜನರ ಬಹು ನಿರೀಕ್ಷಿತ ಬೇಡಿಕೆಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೂಢರ ಹೆಸರನ್ನು ನಾಮಕರಣ ಮಾಡುವಂತೆ ಸುರೇಶ್ ಅಂಗಡಿ ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಹುಬ್ಬಳ್ಳಿ ರೈಲು ನಿಲ್ದಾಣದ ಹೆಸರು ಬದಲಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಮೋದಿಗೆ ಸಿಎಂ ಬಿಎಸ್‍ವೈ ಅಭಿನಂದನೆ
ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ-ಹುಬ್ಬಳ್ಳಿ ಎಂದು ನಾಮಕರಣ ಮಾಡುವ ಮುಖಾಂತರ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.







