ಒಂದು ಕ್ಷಣದ ಚುರುಕು, ಒಂದು ಕೈಯ ಅದ್ಭುತ ಕೌಶಲ್ಯ… ಇದೇ ಒಬ್ಬ ಅಭಿಮಾನಿಯ ಜೀವನವನ್ನೇ ಬದಲಿಸೋ ಹಂತಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾದ SA20 ಕ್ರಿಕೆಟ್ ಲೀಗ್ನ ಮೊದಲ ಪಂದ್ಯದಲ್ಲೇ ಈ ಘಟನೆ ನಡೆದಿದೆ.
MI ಕೇಪ್ಟೌನ್ ತಂಡದ ಬ್ಯಾಟರ್ ರಿಕೆಲ್ಟನ್, ಮಫಾಕಾ ಬೌಲಿಂಗ್ನಲ್ಲಿ ಹೊಡೆದ ಬಿಗ್ ಶಾಟ್ ಗ್ಯಾಲರಿಯತ್ತ ಹಾರಿತ್ತು. ಆ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಯೊಬ್ಬರು ಯಾವುದೇ ಭಯವಿಲ್ಲದೆ, ಒಂದೇ ಕೈಯಿಂದ ಆ ಚೆಂಡನ್ನು ಹಿಡಿದು ಎಲ್ಲರ ಗಮನ ಸೆಳೆದರು. ಕ್ಷಣಾರ್ಧದಲ್ಲಿ ಸ್ಟೇಡಿಯಂ ಕರತಾಡನದಿಂದ ತುಂಬಿ, ಆ ಅಭಿಮಾನಿ ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿದ್ದಾರೆ.
ಈ ಕ್ಯಾಚ್ ವಿಶೇಷವಾಗಿರುವುದಕ್ಕೆ ಕಾರಣ ಕೇವಲ ಶ್ಲಾಘನೆ ಮಾತ್ರವಲ್ಲ. ಈ ಸೀಸನ್ನಲ್ಲಿ SA20 ಲೀಗ್ ಆಯೋಜಕರು ರೂಪಿಸಿರುವ ವಿಶೇಷ ಯೋಜನೆಯಂತೆ, ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿಯುವ ಅಭಿಮಾನಿಗಳಿಗೆ 2 ಮಿಲಿಯನ್ ದಕ್ಷಿಣ ಆಫ್ರಿಕಾದ ಕರೆನ್ಸಿ (ಸುಮಾರು ₹1.08 ಕೋಟಿ ರೂಪಾಯಿ) ಬಹುಮಾನವಾಗಿ ನೀಡಲಾಗುತ್ತದೆ. ಈ ಮೊತ್ತವನ್ನು ಸೀಸನ್ನಲ್ಲಿರುವ ಅತ್ಯುತ್ತಮ ಕ್ಯಾಚ್ಗಳಿಗೆ ಹಂಚಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಅದೇ ಕಾರಣಕ್ಕೆ, ಈ ಅಭಿಮಾನಿಯ ಒಂದು ಕೈ ಕ್ಯಾಚ್ ಈಗ ಕೋಟಿಯ ಕನಸಿನ ಬಾಗಿಲು ತೆರೆದಿದೆ. ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಮಾತ್ರವಲ್ಲ, ಪ್ರೇಕ್ಷಕರೂ ಹೀರೋ ಆಗಬಹುದು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.








