ವಿಜಯನಗರ (ಕೂಡ್ಲಿಗಿ): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿಸಿದೆ. ನಾವು ನುಡಿದಂತೆ ನಡೆಯುತ್ತಿದ್ದರೆ, ಸುಳ್ಳನ್ನೇ ಮನೆ ದೇವರಾಗಿಸಿಕೊಂಡಿರುವ ಬಿಜೆಪಿ ಮಾನ ಮರ್ಯಾದೆ ಇಲ್ಲದೆ ಜನರ ದಾರಿ ತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು.
ಭಾನುವಾರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ಯಾರಂಟಿಗಳಿಂದ ಜನರಿಗೆ ನೇರ ಲಾಭ
ಚುನಾವಣೆಗೂ ಮುನ್ನ ನಾವು ನೀಡಿದ್ದ ಐದೂ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತಂದಿದ್ದೇವೆ. ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ರಾಜ್ಯದ 1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಜಮೆಯಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಕೋಟ್ಯಂತರ ಕುಟುಂಬಗಳಿಗೆ ವಿದ್ಯುತ್ ಬಿಲ್ಲಿನ ಹೊರೆ ತಪ್ಪಿದೆ. ಈ ಎಲ್ಲಾ ಯೋಜನೆಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಶಕ್ತಿ ಹೆಚ್ಚಿದೆ. ಈ ಮೂಲಕ ನಾವು ಜನರ ಜೇಬಿಗೆ ಹಣ ಹಾಕುತ್ತಿದ್ದರೆ, ಬಿಜೆಪಿಯವರು ಕೇವಲ ಸುಳ್ಳುಗಳನ್ನು ಹಂಚುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ
ಕಬ್ಬು ಬೆಳೆಗಾರರ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಎಫ್‌ಆರ್‌ಪಿ (FRP) ಮತ್ತು ಎಂಎಸ್‌ಪಿ (MSP) ನಿಗದಿಪಡಿಸುವಲ್ಲಿ ದ್ರೋಹ ಬಗೆದಿದೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ನೇರ ಹೊಣೆ. ಆದರೆ, ತಮ್ಮದೇ ಕೇಂದ್ರ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಬಿ.ವೈ. ವಿಜಯೇಂದ್ರ ಅವರು ಬೆಳಗಾವಿಗೆ ಹೋಗಿ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೈಕೊಟ್ಟರೂ, ನಮ್ಮ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ಕಬ್ಬು ಬೆಳೆಗಾರರನ್ನು ರಕ್ಷಿಸುವ ಕೆಲಸ ಮಾಡಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸುಳ್ಳಿನ ಸರದಾರರಾದ ಬಿಜೆಪಿಯವರು ಈಗ ಸಾರ್ವಜನಿಕವಾಗಿ ಹರಾಜಾಗಿದ್ದಾರೆ, ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದು ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದರು.
ಕೂಡ್ಲಿಗಿ ಅಭಿವೃದ್ಧಿಗೆ 1,750 ಕೋಟಿ ರೂ.
ಬರಡು ನೆಲವಾಗಿದ್ದ ಕೂಡ್ಲಿಗಿಯನ್ನು ಹಸಿರಾಗಿಸಲು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. 1,70,000 ಜನರಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾಗಿದ್ದಾರೆ. ಇಂತಹ ಕ್ರಿಯಾಶೀಲ ಶಾಸಕರನ್ನು ಪಡೆದ ಕೂಡ್ಲಿಗಿ ಜನತೆ ಅದೃಷ್ಟವಂತರು. ಕಳೆದ ಎರಡು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ 1,750 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಶಾಸಕ ಶ್ರೀನಿವಾಸ್ ಮತ್ತು ಸಂಸದ ತುಕಾರಾಂ ಅವರು ಅಭಿವೃದ್ಧಿಯನ್ನು ಹೊರತುಪಡಿಸಿ ಬೇರೇನನ್ನೂ ಕೇಳದ ನಾಯಕರು. ಇವರಿಬ್ಬರೂ ನಿಮ್ಮ ಆಸ್ತಿಯಿದ್ದಂತೆ, ಇವರನ್ನು ಕಾಪಾಡಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು.








