ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನಾಳನ್ನು ಎನ್‌ಕೌಂಟರ್ ಮಾಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಶ್ರೀರಾಮಸೇನೆ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಅಮೂಲ್ಯ ಲಿಯೋನ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಸೇನೆಯ ತಾಲೂಕು ಅಧ್ಯಕ್ಷ ಸಂಜೀವ್ ಮರಡಿ ಎಂಬುವವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಮರಡಿ, ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಪರ ಯಾರೊಬ್ಬರೂ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು. ಜಾಮೀನು ಸಿಗಬಾರದೆಂದು ಆಗ್ರಹಿಸಿದರು. ಒಂದು ವೇಳೆ ನ್ಯಾಯಾಲಯ ಅಮೂಲ್ಯಳಿಗೆ ಜಾಮೀನು ಕೊಟ್ಟರೆ ನಾವೇ ಎನ್‌ಕೌಂಟರ್ ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಆಕೆಯನ್ನು ಯಾರಾದರೂ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ಇನ್ನು ಕಳೆದ ಗುರುವಾರ ಸಿಎಎ ವಿರೋಧಿಸಿ ನಗರದ ಫ್ರೀಡಂಪಾರ್ಕ್ ನಲ್ಲಿಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ವೇದಿಕೆಗೆ ಏಕಾಏಕಿ ಬಂದ ಅಮೂಲ್ಯ ಲಿಯೋನ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು, ರಾಜ್ಯಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ.