ಮಲೇಷ್ಯಾದಲ್ಲಿ ಕೋವಿಡ್-19 ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ವೈರಸ್ ಪತ್ತೆ
ಕೌಲಾಲಂಪುರ್, ಅಗಸ್ಟ್ 18: ಮಲೇಷ್ಯಾದಲ್ಲಿ ಕಂಡು ಬಂದಿರುವ ಹೊಸ ಕೊರೋನವೈರಸ್, ಕೋವಿಡ್-19 ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ. ಪ್ರಪಂಚದ ಇತರ ಭಾಗಗಳಲ್ಲಿ ಕಂಡುಬಂದಿರುವ ಮತ್ತು ಡಿ 614 ಜಿ ಎಂದು ಕರೆಯಲ್ಪಡುವ ರೂಪಾಂತರದ 45 ಪ್ರಕರಣಗಳಲ್ಲಿ ಕನಿಷ್ಠ ಮೂರು ಜನರಲ್ಲಿ ಈ ಹೊಸ ಕೊರೋನವೈರಸ್ ಕಂಡುಬಂದಿದೆ.

ಭಾರತದಿಂದ ಹಿಂತಿರುಗಿದ ರೆಸ್ಟೋರೆಂಟ್ ಮಾಲೀಕ ತನ್ನ 14 ದಿನಗಳ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದು, ಆತನಿಂದ ಈ ವೈರಸ್ ಹರಡಿದೆ ಎಂದು ಹೇಳಲಾಗಿದೆ. ಇದೀಗ ಆ ವ್ಯಕ್ತಿಗೆ ಐದು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಫಿಲಿಪೈನ್ಸ್‌ನಿಂದ ಹಿಂದಿರುಗಿದ ಜನರ ಗುಂಪಿನಲ್ಲಿಯೂ ಇದೇ ತರಹದ ವೈರಸ್ ಕಾಣಿಸಿಕೊಂಡಿದೆ.
ಲಸಿಕೆಗಳ ಬಗ್ಗೆ ಅಸ್ತಿತ್ವದಲ್ಲಿರುವ ಅಧ್ಯಯನಗಳು ರೂಪಾಂತರದ ಈ ಹೊಸ ಪ್ರಕರಣಗಳಿಂದಾಗಿ ಅಪೂರ್ಣ ಅಥವಾ ನಿಷ್ಪರಿಣಾಮಕಾರಿಯಾಗಬಹುದು ಎಂದು ಆರೋಗ್ಯದ ಮಹಾನಿರ್ದೇಶಕ ನೂರ್ ಹಿಶಮ್ ಅಬ್ದುಲ್ಲಾ ಹೇಳಿದ್ದಾರೆ.
ಯುರೋಪ್ ಮತ್ತು ಯುಎಸ್ ನಲ್ಲಿ ಕೂಡ ವೈರಸ್ ರೂಪಾಂತರಗಳು ಹೆಚ್ಚಾಗಿ ಕಂಡು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಕೋವಿಡ್-19 ರೋಗಿಯಲ್ಲಿ ಇರುವಷ್ಟೇ ರೋಗ ಲಕ್ಷಣಗಳು ಇದರಲ್ಲಿ ಕಂಡು ಬಂದಿದ್ದು, ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಪರಿಣಾಮಕಾರಿತ್ವದ ಮೇಲೆ ರೂಪಾಂತರವು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ತಿಳಿಸಿದೆ.

ಮಲೇಷ್ಯಾದಲ್ಲಿ ಜನರು ಜಾಗರೂಕರಾಗಿರಬೇಕು ಮತ್ತು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನೂರ್ ಹಿಶಮ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ಜನರ ಸಹಕಾರವು ತುಂಬಾ ಅಗತ್ಯವಾಗಿರುತ್ತದೆ, ಇದರಿಂದಾಗಿ ನಾವು ಯಾವುದೇ ಸೋಂಕಿನ ರೂಪಾಂತರದ ಸರಪಳಿಯನ್ನು ಕೊನೆಗೊಳಿಸಬಹುದು ಎಂದು ಅವರು ತಿಳಿಸಿದ್ದಾರೆ. ವಿಶ್ವದ ಇತರ ಭಾಗಗಳಲ್ಲಿ ವ್ಯಾಪಕವಾಗಿರುವ ಕೋವಿಡ್-19 ಪ್ರಕರಣಗಳನ್ನು ತಡೆಯಲು ಮಲೇಷ್ಯಾ ಹೆಚ್ಚಾಗಿ ಯಶಸ್ವಿಯಾಗಿದ್ದರೆ, ದೇಶದಲ್ಲಿ ಕಂಡುಬರುವ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಶನಿವಾರದಿಂದ 26 ಹೊಸ ಪ್ರಕರಣಗಳು ದಾಖಲಾಗಿದೆ.








