ಅಪ್ರಾಪ್ತ ಬಾಲಕಿ ಅತ್ಯಾಚಾರ – ಆರೋಪಿಗೆ 10 ವರ್ಷ ಜೈಲು..!
ಮಂಗಳೂರು : ಟಿವಿ ನೋಡಲು ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಜೊತೆಗೆ 1.1 ಲಕ್ಷ ದಂಡವನ್ನ ವಿಧಿಸಿದೆ.
ಮೂರು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಿ ಮೂಡಿಗೆರೆಯ ಕನ್ನೆ ಹಳ್ಳಿ ನಿವಾಸಿ ಶಶಿ ಯಾನೆ ಶಶಿ ಕುಮಾರ್(28) ನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಜೊತೆಗೆ 1.1 ಲಕ್ಷ ದಂಡವನ್ನ ವಿಧಿಸಿದೆ.
ಆರೋಪಿಯು ಮೂಡುಬಿದಿರೆಯಲ್ಲಿ ಖಾಸಗಿ ಫೈನಾನ್ಸ್ಸಂಸ್ಥೆಯೊಂದರ ಪಿಗ್ಮಿ ಕಲೆಕ್ಟರ್ಆಗಿ ಕೆಲಸ ನಿರ್ವಹಿಸುತ್ತಿದ್ದ. ಪ್ರಸ್ತುತ ಮೂಡುಬಿದಿರೆ ತಾ| ಮಾರ್ಪಾಡಿ ಗ್ರಾಮದ ಅಲಂಗಾರ್ನಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ.
ಆತ ವಾಸ್ತವ್ಯ ಮಾಡುತ್ತಿದ್ದ ಮನೆಗೆ ಟಿ.ವಿ. ವೀಕ್ಷಣೆಗೆ ನೆರೆಮನೆಯ 14 ವರ್ಷದ ಬಾಲಕಿ ಬರುತ್ತಿದ್ದು, ಆಕೆ ಸಲುಗೆಯಿಂದಿದ್ದಳು. 2017ರ ನವೆಂಬರ್ನಲ್ಲಿ ಟಿ.ವಿ. ನೋಡಲು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಬಳಿಕವೂ ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು. 2018 ಜೂನ್ನಲ್ಲಿ ಬಾಲಕಿ ಗರ್ಭಿಣಿ ಆಗಿದ್ದಳು. ಮೂಡುಬಿದಿರೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








