ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೆಬ್ರವರಿ 24ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ವಿಶ್ವದ ದೊಡ್ಡಣ್ಣನನ್ನ ಸ್ವಾಗತಿಸಲು ಭಾರತ ಸಕಲ ಸಿದ್ಧತೆ ನಡೆಸುತ್ತಿದೆ. ಪ್ರಮುಖವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಗೆ ಟ್ರಂಪ್ ಭೇಟಿ ನೀಡಲಿದ್ದು, ಅಹಮದಾಬಾದ್ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈಗಿನ ವೇಳಾಪಟ್ಟಿಯ ಪ್ರಕಾರ ಒಟ್ಟಾರೆ ಗುಜರಾತ್ನಲ್ಲಿ ಟ್ರಂಪ್ ಮೂರು ಗಂಟೆಗೂ ಹೆಚ್ಚು ಕಾಲ ಕಳೆಯಲಿದ್ದಾರೆ. ಅದಕ್ಕಾಗಿ ಟ್ರಂಪ್ ಭೇಟಿಯಲ್ಲಿ ಯಾವುದೇ ಕೊರತೆಯಾಗದಂತೆ, ಎಲ್ಲವನ್ನ ಅಚ್ಚುಕಟ್ಟಾಗಿ ಮಾಡಲು ಗುಜರಾತ್ ಸರ್ಕಾರ ಮುಂದಾಗಿದೆ.
3 ಗಂಟೆ ಗುಜರಾತ್ ಭೇಟಿಗೆ 100 ಕೋಟಿಗೂ ಅಧಿಕ ಖರ್ಚು..!
ಡೊನಾಲ್ಡ್ ಟ್ರಂಪ್ ಅವರು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ಬಳಿಕ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ , 22 ಕಿಲೋ ಮೀಟರ್ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ ಮೋಟೆರಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಮೂರು ಗಂಟೆಯ ಈ ಕಾರ್ಯಕ್ರಮಕ್ಕೆ, ಬರೋಬ್ಬರಿ ನೂರು ಕೋಟಿ ರೂಪಾಯಿ ವ್ಯಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ರಸ್ತೆಗಳ ಅಗಲೀಕರಣ-ನವೀಕರಣ, ಹೊಸ ರಸ್ತೆಗಳ ಕಾಮಗಾರಿಗೆ 80 ಕೋಟಿ ರೂ.
ಟ್ರಂಪ್ ಅವರ ಭದ್ರತೆಗೆ 12ರಿಂದ 15 ಕೋಟಿ ರೂಪಾಯಿ ಖರ್ಚು.
ಮೋಟೆರಾ ಕ್ರೀಡಾಂಗಣದ ಉದ್ಘಾಟನೆ ಹಾಗೂ ಟ್ರಂಪ್ ಜೊತೆ ಬರುವ ಅತಿಥಿಗಳ ಊಟೋಪಚಾರಕ್ಕೆ 7ರಿಂದ 10 ಕೋಟಿ ರೂ.
ಅಹಮದಾಬಾದ್ ನಗರ ಅಂದ ಹೆಚ್ಚಿಸಲು, ರೋಡ್ ಶೋ ನಡೆಯುವ ಮಾರ್ಗವನ್ನ ಹೂವಿನಿಂದ ಕಂಗೊಳಿಸಲು 6 ಕೋಟಿ ರೂಪಾಯಿ ವ್ಯಯ.
ಮೋಟೆರಾ ಕ್ರೀಡಾಂಗಣ ಹಾಗೂ ರೋಡ್ ಶೋ ನಡೆಯುವ ಮಾರ್ಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲು 4 ಕೋಟಿ ರೂಪಾಯಿ ಖರ್ಚು.
ಟ್ರಂಪ್ ಭೇಟಿಗಾಗಿ 100 ಕೋಟಿಗೂ ಅಧಿಕ ಹಣ ಖರ್ಚು ಮಾಡಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ , ಅಹಮದಾಬಾದ್ ನಗರ ಅಭಿವೃದ್ಧಿ ಪ್ರಾಧಿಕಾರ ಶ್ರಮ ವಹಿಸುತ್ತಿವೆ.








