‘ಬಹುಕೃತ ವೇಷಂ’ನಲ್ಲಿ ವೈಷ್ಣವಿಯ ಹೊಸ ವೇಷ : ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾದಲ್ಲಿ ‘ಸನ್ನಿಧಿ’
ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಯೇ ಇದ್ದು, ಫೈನಲ್ ವರೆಗೂ ಬಂದ ಜನಮೆಚ್ಚಿದ ಸ್ಪರ್ಧಿ , ಕಿರುತೆರೆ ಪ್ರೇಕ್ಷಕರ ಫೇವರೇಟ್ ‘ಸನ್ನಿಧಿ’ ಸದ್ಯ ಹೊಸ ಅವತಾರದಲ್ಲಿ ಬೆಳ್ಳಿತೆರೆ ಮೇಲೆ ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು.. ‘ಬಹುಕೃತವೇಷಂ’ ಸಿನಿಮಾ ಮೂಲಕ ವೈಷ್ಣವಿ ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದ ವೈಷ್ಣವಿ 2019ರಲ್ಲಿ ಗಿರ್ ಗಿಟ್ಲೆ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.
ಇದೀಗ ಸಖತ್ ಥ್ರಿಲ್ಲರ್ , ಸಸ್ಪೆನ್ಸ್ ಕಥಾಹಂದರ ಹೊಂದಿರುವ ಬಹುಕೃತವೇಷಂನಲ್ಲಿ ಬಣ್ಣ ಹಚ್ಚಿದ್ದು, ಶೂಟಿಂಗ್ ಕಂಪ್ಲೀಟ್ ಆಗಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದ್ಹಾಗೆ ವೈಷ್ಣವಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಸಿನಿಮಾ ಕೆಲಸದಲ್ಲಿ ತೊಡಗಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದು ಶೂಟಿಂಗ್ ಮುಗಿಸಿದ್ದಾರೆ. ಸಿನಿಮಾ ಸದ್ಯ ಟೀಸರ್ ನಿಂದಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಹೆಜ್ಜೆಗೊಂದು ವೇಷ , ಸಸ್ಪೆನ್ಸ್ ಎಲಿಮೆಂಟ್ಸ್ , ಮುಂದೇನಾಗುತ್ತೆ ಅನ್ನೋ ಎಕ್ಸೈಟ್ ಮೆಂಟ್ ಮೂಡಿಸುತ್ತದೆ. ಸದ್ಯ ಟೀಸರ್ ಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದ್ದು, ವೈಷ್ಣವಿ ನಾಯಕಿಯಾಗಿರುವ 2ನೇ ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
ಅಂದ್ಹಾಗೆ ಈ ಚಿತ್ರದಲ್ಲಿ ವೈಷ್ಣವಿ ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದಲ್ಲಿ ವೈಷ್ಣವಿ ನಕ್ಷತ್ರಳಾಗಿ ಕಾಣಿಸಿಕೊಳ್ತಿದ್ದು, ಇಂಡಿಪೆಂಡೆಂಟ್ ಹಾಗೂ ತುಂಬ ಸ್ಟ್ರಾಂಗ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ವೈಷ್ಣವಿಯ ಫೈಟ್ ( ಆಕ್ಷನ್ ಸೀನ್ ) ಕೂಡ ಇದೆ ಎನ್ನಲಾಗಿದೆ. ಮಿಡಲ್ ಕ್ಲಾಸ್ ಕುಟುಂಬದ ಹುಡುಗಿಯ ಜೀವನದಲ್ಲಿ ಅದೇನೆಲ್ಲಾ ಸಮಸ್ಯೆಗಳು ಬರುತ್ತೆ. ತಿರುಗಳು ಬರುತ್ತವೆ ಅದನ್ನ ಆಕೆ ಹೇಗೆ ಎದುರಿಸುತ್ತಾಳೆ ಅನ್ನೋದರ ಸುತ್ತ ಚಿತ್ರದ ಕಥೆಯನ್ನ ಹೆಣೆಯಲಾಗಿದೆ.
ಹೊಸಬರ ಟೀಮ್ ನಿಂದಲೇ ತಯಾರಾಗುತ್ತಿರುವ ಚಿತ್ರದ ನಾಯಕ ಸಖತ್ ಖಡಕ್ ಆಗಿ ಕಾಣಿಸಿಕೊಳ್ತಿದ್ದು, ಟೀಸರ್ ನಲ್ಲೇ ಹೀರೋ ಮಾಸ್ ಆಟಿಟ್ಯೂಡ್ ಜನರಿಗೆ ತುಂಬ ಹಿಡಿಸಿದೆ. ಶಶಿಕಾಂತ್ , ವೈಷ್ಣವಿ , ಕರಣ್ ಆರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಕೆಸಿ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿ ಮೂಡಿಬರುತ್ತಿರುವ ಚಿತ್ರಕ್ಕೆ ಪ್ರಶಾಂತ ಕೆ ಎಲ್ಲಂಪಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ.