ಗರ್ಭಪಾತದ ವೇಳೆ ಅತ್ಯಾಚಾರ ಸಂತ್ರಸ್ತೆ ಸಾವು
ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟಿರುವ ಘಟನೆಯು ಉತ್ತರಪ್ರದೇಶದ ಹಮಿರ್ ಪುರದಲ್ಲಿ ನಡೆದಿದೆ. ಘಟನೆ ಸಂಬಂಧ ಗರ್ಭಪಾತಕ್ಕೆ ಬಲವಂತ ಮಾಡಿದ ತಂದೆ ಹಾಗೂ ಚಿಕ್ಕಪ್ಪ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರನ್ನ ಪೊಲೀಸರು ಬಂಧಿಸಿದ್ದಾರೆ.
6 ತಿಂಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ದಲಿತ ಯುವತಿ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ್ದ. ಆತನನ್ನ ಪೊಲೀಸರು ಬಂಧಿಸಿದ್ದು, ಜೈಲಿನಲ್ಲಿದ್ದಾನೆ. ಇತ್ತೀಚೆಗೆ ಅಂದ್ರೆ ಸೆಪ್ಟೆಂಬರ್ 25 ಕ್ಕೆ ಸಂತ್ರಸ್ತೆಯನ್ನ ಅನಾರೋಗ್ಯ ಕಾರಣಕ್ಕೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಕೆ ಗರ್ಭವತಿ ಎಂಬ ವಿಚಾರ ತಿಳಿದಿದೆ. ನಂತರ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಆಕೆ ಸಾವನಪ್ಪಿರೋದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿ ಶೈಲೇಂದ್ರ , ಬಲವಂತವಾಗಿ ಗರ್ಭಪಾತ ಮಾಡಿಸಲು ಮುಂದಾಗಿದ್ದ ಸಂತ್ರಸ್ತೆಯ ತಂದೆ ರಾಮ್ ನಾರಾಯಣ್, ಚಿಕ್ಕಪ್ಪ ಶಿವ ನಾರಾಯಣ್ ವಿರುದ್ಧ ಹಾಗೂ ಗರ್ಭಪಾತ ಮಾಡಿದ ವೈದ್ಯನ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.








