ಕೊಲ್ಕತ್ತಾ : ಮಮತಾ ಬ್ಯಾನರ್ಜಿ ಕಾರ್ಯಾಲಯದಲ್ಲಿ ಬೆಂಕಿ ಅನಾಹುತ
ಕೋಲ್ಕತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕೋಲ್ಕತ್ತಾದ ರಾಜ್ಯ ಸೆಕ್ರೆಟರಿಯೇಟ್ ಕಟ್ಟಡದ 14 ನೇ ಮಹಡಿಯಲ್ಲಿರುವ ದೀದಿ ಕಾರ್ಯಾಲಯದ ಮೇಲ್ಛಾವಣಿಗೆ ಬೆಂಕಿ ಬಿದ್ದಿದೆ. ಬೆಳಿಗ್ಗೆ 11.45ರ ಸುಮಾರಿಗೆ ಈ ಘಟನೆ ನಡೆದಿಇದೆ. ಕಟ್ಟಡದ ಮೇಲಿನ ವೊಡಾಫೋನ್ ನಲ್ಲಿ ಸಿಗ್ನಲ್ ಟವರ್ ನ ಎಲೆಕ್ಟ್ರಿಕ್ ಪ್ಯಾನಲ್ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ದುರ್ಗಾ ಪೂಜೆ ರಜೆಗಳು ಇರುವುದರಿಂದ ಸಿಎಂ ಕಾರ್ಯಾಲಯವನ್ನು ಮುಚ್ಚಲಾಗಿತ್ತು. ಹೀಗಾಗಿ ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಇನ್ನೂ ವೊಡಾಫೋನ್ ದೂರ ಸಂಪರ್ಕ ಕಂಪನಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಿಗ್ನಲ್ ಟವರ್ ಗೆ ಪಿಡಬ್ಲ್ಯೂಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದರಿಂದ ಪಿಡಬ್ಲ್ಯೂಡಿಯ ಸಿವಿಲ್ ಮತ್ತು ವಿದ್ಯುತ್ ಘಟಕದ ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು ಎನ್ನಲಾಗಿದೆ. ಅಲ್ಲದೇ ದಟ್ಟವಾಗಿ ಅಗ್ನಿ ವ್ಯಾಪಿಸುವಷ್ಟರಲ್ಲೆ ಅಗ್ನಿ ನಂದಿಸುವ ಕಾರ್ಯ ನಡೆದ ಕಾರಣ ಮಹತ್ವದ ದಾಖಲೆಗಳಿಗೂ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.