ಬೆಂಗಳೂರು: ಕಳೆದ 10 ತಿಂಗಳಿಂದ ರಾಜ್ಯ ಹಾಗೂ ಜನರ ಜೀವನವನ್ನು ಹೆಮ್ಮಾರಿ ಕೊರೊನಾ ಹಿಂಡಿ ಹಿಪ್ಪೆ ಮಾಡಿದೆ. ಸಣ್ಣಪುಟ್ಟ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಸಬೂಬು ಆಗಾಗ ಬರುತ್ತಲೇ ಇರುತ್ತದೆ.
ಆದರೆ, ವೀರಶೈವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ, ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ ಕೊಟ್ಟಿತ್ತು. ಆಗಲೂ ಎದುರಾದ ಪ್ರಶ್ನೆ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದಿರುವಾಗ ಅಭಿವೃದ್ಧಿ ನಿಗಮಗಳಿಗೆ ಇಷ್ಟೋಂದು ಹಣ ಎಲ್ಲಿಂದ ಬಂತು. ಮುಂಬರುವ ಉಪಚುನಾವಣೆ ಕಾರಣಕ್ಕೆ ಓಟ್‍ಬ್ಯಾಂಕ್ ಗಿಟ್ಟಿಸಿಕೊಳ್ಳಲು ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಣ ಬಿಡುಗಡೆ ಮಾಡಿದೆ ಎಂದು ಆರೋಪಿಸಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಮಾಡಿ, ನಿರಂತರ ಹೋರಾಟ ಮಾಡಿದ್ದವು.
ಈಗ ಮತ್ತೆ ಅಂತಹದ್ದೇ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಾರಿಗೆ ನೌಕರರು ಮುಷ್ಕರ ಆರಂಭಿಸಿದಾಗಲು ಕೊರೊನಾ ಕಾರಣದಿಂದ ಸರ್ಕಾರ ಖಜಾನೆ ಖಾಲಿಯಾಗಿದೆ, ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಆದರೆ, ಚಿಕ್ಕಮಗಳೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 1063 ಕೋಟಿ ಅನುದಾನ ನೀಡಿದ್ದಾರೆ. ಶುಕ್ರವಾರ 1063 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಿಎಸ್‍ವೈ, ಕೊರೊನಾ ಸಂಕಷ್ಟದಲ್ಲೂ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಾಗಿ 1063 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ, ಜಿಲ್ಲಾಸ್ಪತ್ರೆಯನ್ನು 1 ಸಾವಿರ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎನ್ನುತ್ತಲೇ ಕೋಟಿಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ ರವಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ತ್ಯಜಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲೂ ಸಿ.ಟಿ ರವಿ ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ 1063 ಕೋಟಿ ರೂ. ಅನುದಾನ ಕೊಡು ಸರ್ಕಾರಕ್ಕೆ ಸಾಧ್ಯವಾಗಿದೆಯಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಉದ್ಯೋಗ, ಉದ್ಯಮ, ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಲಕ್ಷಾಂತರ ಮಂದಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಆದರೆ, ಬೀದಿಪಾಲಾದವರ ವಿಚಾರ ಬಂದಾಗ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎನ್ನುವ ಸರ್ಕಾರಗಳು ಆತ್ಮವಿಮರ್ಶೆ ಮಾಡಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ರಾಜ್ಯದ ಸಾಮಾನ್ಯ ನಾಗರಿಕನದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel