108 ಸೇವೆಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಸಲು ಸಮ್ಮತಿಸಿದ ಸರಕಾರ Saaksha Tv
ಬೆಂಗಳೂರು:108ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಆರೊಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಹೊಸ ರೂಪ ನೀಡಲು ಹಾಗೂ ಜನಸಾಮಾನ್ಯರ ಜೀವ ರಕ್ಷಣೆಗಾಗಿ ರಾಜ್ಯದಲ್ಲಿ 108-ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಅಂಬುಲೆನ್ಸ್ ಸೇವೆಯನ್ನು ಉನ್ನತೀಕರಿಸುವ ಅಗತ್ಯತೆ ಕಂಡುಬಂದಿದೆ. ಹೀಗಾಗಿ ಹೊಸ ಮಾದರಿಯ ಅಂಬುಲೆನ್ಸ್ ಸೇವೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆ, ಹೊಸ ಸುಧಾರಣಾ ಕ್ರಮಗಳನ್ನು ಅಂಬುಲೆನ್ಸ್ ಸೇವೆಯಲ್ಲಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಅಲ್ಲದೇ ರೋಗಿಯ ಜೀವ ಉಳಿಸಲು ಗೋಲ್ಡನ್ ಅವರ್ ತುಂಬಾ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಆತನ/ಆಕೆಯ ಜೀವ ಉಳಿಯುತ್ತದೆ. ಇಂತಹ ಸೇವೆಯನ್ನು ಸಕಾಲಕ್ಕೆ ನೀಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿಯೇ ಅಂಬುಲೆನ್ಸ್ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಮುನ್ನುಡಿ ಬರೆದಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಲ್.ಎಸ್.) ಅಂಬುಲೆನ್ಸ್ ಮತ್ತು ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ಎ.ಎಲ್.ಎಸ್) ಆಂಬ್ಯುಲೆನ್ಸ್ ಇರಬೇಕು ಎಂದು ಹೇಳಿದ್ದಾರೆ.
ಅಲ್ಲದೇ ಒಂದು ಆಂಬ್ಯುಲೆನ್ಸ್ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳನ್ನು ನಿರ್ವಹಣೆ ಮಾಡಿದರೆ ಮತ್ತು 120 ಕಿ.ಮೀ. ಗಿಂತ ಹೆಚ್ಚು ದೂರ ಕ್ರಮಿಸಿದರೆ, ಅಂತಹ ಕಡೆ ಮತ್ತೊಂದು ಅಂಬುಲೆನ್ಸ್ ಒದಗಿಸಬೇಕಾಗುತ್ತದೆ.ಈ ಮಾರ್ಗಸೂಚಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವ ಮಹತ್ವಕಾಂಕ್ಷೆ ಸರ್ಕಾರಕ್ಕಿದೆ. ಹೀಗಾಗಿ ಅಂಬ್ಯುಲೆನ್ಸ್ ಸಂಖ್ಯೆಯನ್ನು ಪ್ರಸ್ತುತದ 710 ರಿಂದ 750 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಪೈಕಿ, 40% ಎ.ಎಲ್.ಎಸ್ ಮತ್ತು 60% ಬಿ.ಎಲ್.ಎಸ್.ಆಗಿರಲಿವೆ. ಸರ್ಕಾರ ಹೊಸದಾಗಿ 380 ಅಂಬುಲೆನ್ಸ್ ಗಳನ್ನು ಖರೀದಿ ಮಾಡಲಿದೆ. ಈ ಪೈಕಿ, 340 ಅಂಬುಲೆನ್ಸ್‌ಗಳ ಹಳೆಯ ಅಂಬುಲೆನ್ಸ್‌ಗಳ ಬದಲಿಯಾಗಿ ಬರಲಿವೆ. ಉಳಿದ 40 ಹೊಸ ಅಂಬುಲೆನ್ಸ್‌ಗಳಾಗಿರುತ್ತವೆ ಎಂದು ಸಚಿವರು ತಿಳಿಸಿದರು.









