ಯೋಗಿ ಸಂಪುಟದ 11 ಸಚಿವರಿಗೆ ಸೋಲು – Saaksha Tv
ಉತ್ತರಪ್ರದೇಶ: ಗುರುವಾರದ ಚುನಾವಣಾ ಪಲಿತಾಂಶದಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆದ್ದಿದ್ದು, ಉತ್ತರಪ್ರದೇಶದಲ್ಲಿ 255 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು, 11 ಸಚಿವರಿಗೆ ಸೋಲಾಗಿದೆ.
ಚುನಾವಣಾ ಆಯೋಗದ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 402 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು 255 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿಯ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಸೋನೆಲಾಲ್) 12 ಮತ್ತು ನಿಶಾದ್ ಪಕ್ಷವು 6 ಸ್ಥಾನಗಳನ್ನು ಗಳಿಸಿದೆ. ಆದರೆ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ 11 ಜನರು ಸೋತಿದ್ದು, ಬಿಜೆಪಿಗೆ ಭಾರಿ ಮುಖಭಂಗವನ್ನುಂಟು ಮಾಡಿದೆ.
ಬಿಜೆಪಿಯ ಹಿಂದಿನ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ, ಸಚಿವರಾಗಿದ್ದ ಸುರೇಶ್ ರಾಣಾ, ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್, ಸಚಿವ ಆನಂದ್ ಸ್ವರೂಪ್ ಶುಕ್ಲಾ, ಕಂದಾಯ ಸಚಿವ ಛತ್ರಪಾಲ್ ಸಿಂಗ್ ಗಂಗ್ವಾರ್, ಲೋಕೋಪಯೋಗಿ ಇಲಾಖೆಯ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ, ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಸೋತಿದ್ದಾರೆ.
ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ ಅವರು ಸಿರತು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಇಲ್ಲಿ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳಿಂದ ಸೋತಿದ್ದಾರೆ. ಪಲ್ಲವಿ ಪಟೇಲ್ ಅವರು ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಅಪ್ನಾ ದಳದವರಾಗಿದ್ದಾರೆ.
ಮತ್ತೋರ್ವ ಸಚಿವರಾಗಿದ್ದ ಸುರೇಶ್ ರಾಣಾ ಅವರು ಶಾಮ್ಲಿ ಜಿಲ್ಲೆಯ ಠಾಣಾ ಭವನ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ಅಶ್ರಫ್ ಅಲಿ ಖಾನ್ ವಿರುದ್ಧ 10,000 ಮತಗಳಿಂದ ಸೋತಿದ್ದಾರೆ. ಹಾಗೇ ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಕಂದಾಯ ಸಚಿವ ಛತ್ರಪಾಲ್ ಸಿಂಗ್ ಗಂಗ್ವಾರ್ ಸಮಾಜವಾದಿ ಪಕ್ಷದ ಅತೌರ್ ರೆಹಮಾನ್ ವಿರುದ್ಧ 3,355 ಮತಗಳಿಂದ ಮಣಿಸಲ್ಪಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್ ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ರಾಮ್ ಸಿಂಗ್ ವಿರುದ್ಧ 22,051 ಮತಗಳಿಂದ ಸೋತಿದ್ದಾರೆ. ಅಲ್ಲದೇ ಲೋಕೋಪಯೋಗಿ ಇಲಾಖೆಯ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ಅನಿಲ್ ಕುಮಾರ್ ವಿರುದ್ಧ 20,876 ಮತಗಳಿಂದ ಸೋತಿದ್ದಾರೆ.
ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ಬಲ್ಲಿಯಾ ಜಿಲ್ಲೆಯ ಬರಿಯಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜೈಪ್ರಕಾಶ್ ಅಂಚಲ್ ವಿರುದ್ಧ 12,951 ಮತಗಳಿಂದ ಸೋತಿದ್ದಾರೆ. ಆನಂದ್ ಸ್ವರೂಪ್ ಶುಕ್ಲಾ ಅವರು ಕಳೆದ ಬಾರಿ ಬಲ್ಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಬಲ್ಲಿಯಾದಲ್ಲಿ ಫೆಫ್ನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಗ್ರಾಮ್ ಸಿಂಗ್ ವಿರುದ್ಧ 19,354 ಮತಗಳಿಂದ ಸೋತಿದ್ದಾರೆ.








