ಪದ್ಮಶ್ರೀ ಪುರಸ್ಕೃತ ನಂದಾ ಮಾಸ್ಟರ್ ಇನ್ನಿಲ್ಲ – ಮೋದಿ ಸಂತಾಪ
ಕಳೆದ ತಿಂಗಳಷ್ಟೆ ರಾಷ್ಟ್ರ ಪ್ರಶಸ್ತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಶಿಕ್ಷಕ ನಂದಾ ಪ್ರಸ್ಟಿ ಅವರು ಇಂದು ನಿಧನರಾದರು.
ಕಳೆದ ವಾರ ಒಡಿಶಾದ ಜಾಜ್‌ಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಪ್ರಕಾರ, ಪ್ರಸ್ಟಿ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಜ್ವರ, ಕೆಮ್ಮು ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಹಾಸಿಗೆಯಿಡಿದಿದ್ದರು.
‘ನಂದಾ ಮಾಸ್ಟರ್’ ಎಂದೇ ಖ್ಯಾತರಾಗಿರುವ ನಂದಾ ಪ್ರಸ್ಟಿ ಅವರಿಗೆ ಶಿಕ್ಷಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿನ ಸುದೀರ್ಘ ಕೊಡುಗೆಗಾಗಿ ನವೆಂಬರ್ 9 ರಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂದಾ ಪ್ರಸ್ಟಿ ಅವರು ತಮ್ಮ ಜೀವನದ ಹಲವು ದಶಕಗಳನ್ನು ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಉಚಿತ ಶಿಕ್ಷಣವನ್ನು ನೀಡಿದರು. ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ 7 ನೇ ತರಗತಿಯ ನಂತರ ತನ್ನ ಅಧ್ಯಯನವನ್ನು ನಿಲ್ಲಿಸಬೇಕಾಗಿದ್ದ ಪ್ರಸ್ಟಿ, ಸ್ವಾತಂತ್ರ್ಯದ ನಂತರ ತನ್ನ ಗ್ರಾಮದಲ್ಲಿ ಅನಕ್ಷರತೆಯನ್ನು ತೊಡೆದುಹಾಕುವ ಗುರಿಯೊಂದಿಗೆ ಮಕ್ಕಳಿಗೆ ಉಚಿತವಾಗಿ ಕಲಿಸುತ್ತಿದ್ದರು.
ಪದ್ಮಶ್ರೀ ಪುರಸ್ಕೃತರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ, “ಶ್ರೀ ನಂದ ಪ್ರಸ್ಟಿ ಜಿ ಅವರ ನಿಧನದಿಂದ ನೋವಾಗಿದೆ. ಒಡಿಶಾದಲ್ಲಿ ಶಿಕ್ಷಣದ ಸಂತೋಷವನ್ನು ಹರಡಲು ಅವರು ಮಾಡಿದ ಪ್ರಯತ್ನಗಳಿಂದಾಗಿ ಹೆಚ್ಚು ಗೌರವಾನ್ವಿತ “ನಂದಾ ಸರ್” ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತಾರೆ. ಅವರು ಕೆಲವು ವಾರಗಳ ಹಿಂದೆ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರದ ಗಮನ ಮತ್ತು ಪ್ರೀತಿಯನ್ನು ಸೆಳೆದರು. ಓಂ ಶಾಂತಿ” ಎಂದಿದ್ದಾರೆ.








