ಬಸವಣ್ಣನ ಭಾವಚಿತ್ರಕ್ಕೆ ಅವಮಾನ ಮಾಡಿದವರ ಬಂಧನ
ಬಸವಣ್ಣನ ಭಾವಚಿತ್ರಕ್ಕೆ ಮಸಿ ಬಳಿದು ಕನ್ನಡ ಬಾವುಟವನ್ನು ಕಿತ್ತು ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಲಸಿಯ ಬಸವೇಶ್ವರ ವೃತ್ತದಲ್ಲಿದ್ದ ಬಸವೇಶ್ವರ ಭಾವ ಚಿತ್ರಕ್ಕೆ ಸಗಣಿ ಎರಚಿದ್ದ ಆರೋಪಿಗಳು ಬಳಿಕ ಗ್ರಾಮ ಪಂಚಾಯತ್ ಆವರಣದಲ್ಲಿದ್ದ ಕನ್ನಡ ಬಾವುಟ ಕಿತ್ತು ವಿಕೃತಿ ಪ್ರದರ್ಶಿಸಿದ್ದರು. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಸಚಿನ್ ಒಮಣ್ಣ ಗುರವ್, ಸಂಜು ಒಮಣ್ಣ ಗುರವ್ ಮತ್ತು ಗಣೇಶ್ ಪಡ್ನೇಕರ್ ಎಂಬ ಮೂವರನ್ನು ಬಂಧಿಸಲಾಗಿದೆ.
ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಂಡ ಪ್ರಕರಣದಿಂದ ಕೆರಳಿದ್ದ ಕನ್ನಡಿಗರು ಹಲಸಿ ಘಟನೆಯಿಂದ ಮತ್ತಷ್ಟು ಆಕ್ರೋಶಗೊಂಡಿದ್ದರು. ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತ ಪಡಿಸಿದ್ದರು
ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಕಿಡಿಗೇಡಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಇದೀಗ ಕೊನೆಗೂ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.








