ಆಯಿಲ್ ರಿಫೈನರಿಯಲ್ಲಿ ಅಗ್ನಿ ದುರಂತ – 3 ಸಾವು, 40ಕ್ಕೂ ಹೆಚ್ಚು ಮಂದಿ ಗಾಯ
ಪಶ್ಚಿಮ ಬಂಗಾಳ ರಾಜ್ಯದ ಪುರ್ಬಾ ಮೇದಿನಿಪುರ್ ಜಿಲ್ಲೆಯ ಹಲ್ದಿಯಾದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಂಸ್ಕರಣಾಗಾರದ ಆವರಣದಲ್ಲಿ ಮಂಗಳವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅಪಘಾತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 44 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ.
“ಮೋಟಾರ್ ಸ್ಪಿರಿಟ್ ಗುಣಮಟ್ಟ (MSQ) ಘಟಕದಲ್ಲಿ, ಕೆಲಸದ ಸಮಯದಲ್ಲಿ,ನಿನ್ನೆ ಸುಮಾರು 2 ಗಂಟೆಗೆ ಈ ಘಟನೆ ಜರುಗಿದೆ.
ಮೃತಪಟ್ಟ ಮೂವರು ಕಾರ್ಮಿಕರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡವರಿಗೆ ಪ್ರಾಥಮಿಕ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ಚಿಕಿತ್ಸೆಗಾಗಿ ಹಲ್ದಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಮಾರು 25 ಗಾಯಾಳುಗಳನ್ನು ಕೋಲ್ಕತ್ತಾಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನಿಡಲಾಗುತ್ತಿದೆ. ಇನ್ನೂ ಹೆಚ್ಚಿನ ಗಾಯಳುಗಳನ್ನ ಸ್ಥಳಾಂತರಿಸಬಹುದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಗಾಯಗೊಂಡವರಲ್ಲಿ ಅನೇಕರನ್ನು ಪಂಜಾಬ್ ಮತ್ತು ರಾಜಸ್ಥಾನದಿಂದ ಬಂದಿರುವ ವಲಸಿಗ ಕಾರ್ಮಿಕರು ಎಂದು ಗುರುತಿಸಲಾಗಿದೆ. “ಈ ಪ್ರದೇಶದಲ್ಲಿ ಬೆಂಕಿಯಿಂದ ಸುಡಲ್ಪಡುವ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿ ತೀವ್ರತೆ ಉಲ್ಬಣಗೊಂಡಿದೆ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಹಲ್ದಿಯಾದ ಐಒಸಿಯಲ್ಲಿ ಸಂಭವಿಸಿದ ಬೆಂಕಿಯಿಂದ ತೀವ್ರ ದುಃಖವಾಗಿದೆ. ಮೂರು ಅಮೂಲ್ಯ ಜೀವಗಳು ಕಳೆದುಹೋಗಿವೆ ಮತ್ತು ದುಃಖದ ಈ ಸಮಯದಲ್ಲಿ ನನ್ನ ಸಾಂತ್ವಾನಗಳು ಕುಟುಂಬಗಳೊಂದಿಗೆ ಇವೆ. ಗಾಯಾಳುಗಳನ್ನು ಹಸಿರು ಕಾರಿಡಾರ್ ಮೂಲಕ ಕೋಲ್ಕತ್ತಾಕ್ಕೆ ಕರೆತರಲಾಗುತ್ತಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರವು ಎಲ್ಲಾ ಸಹಾಯವನ್ನು ನೀಡುತ್ತದೆ ಎಂದು ಬ್ಯಾನರ್ಜಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.