ಲುಧಿಯಾನಾ ಜಿಲ್ಲಾ ನ್ಯಾಯಾಲಯದಲ್ಲಿ ಸ್ಪೋಟ – ಒಬ್ಬರ ಸಾವು
ಪಂಜಾಬ್ ರಾಜ್ಯದ ಲುಧಿಯಾನಾದಲ್ಲಿ ಪೊಲೀಸ್ ಕಮಿಷನರ್ ಕಚೇರಿಯ ಸಮೀಪವಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಭಾರಿ ಸ್ಪೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ನ್ಯಾಯಾಲಯ ಕಟ್ಟಡದ ಎರಡನೇ ಮಹಡಿಯ ವಾಶ್ ರೂಂನಲ್ಲಿ ಮಧ್ಯಾಹ್ನ 12.22ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಎರಡನೇ ಮಹಡಿಯಲ್ಲಿ ಎಂಟು ನ್ಯಾಯಾಲಯ ಕೊಠಡಿಗಳಿವೆ, ಆದರೆ ವಕೀಲರ ಒಂದು ವಿಭಾಗದ ಮುಷ್ಕರದಿಂದಾಗಿ ಗುರುವಾರ ಹೆಚ್ಚಿನ ಜನರು ಹಾಜರಾಗಿರಲಿಲ್ಲ. ಇದರಿಂದ ಹೆಚ್ಚಿನ ಪ್ರಾಣಾಪಾಯ ತಪ್ಪಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನ್ಯಾಯಾಲಯದ ಆವರಣವನ್ನು ತೆರವು ಮಾಡಲಾಗುತ್ತಿದೆ. ಗಾಯಗೊಂಡವರಲ್ಲಿ ಓರ್ವ ವಕೀಲ ಆರ್ ಎಸ್ ಮಾಂಡ್ ಎಂದು ಗುರುತಿಸಲಾಗಿದೆ.
ಎರಡನೇ ಮಹಡಿಯಲ್ಲಿ ನ್ಯಾಯಾಲಯದ ಕ್ಯಾಂಟೀನ್ ಕೂಡ ಇರುವುದರಿಂದ ಯಾವುದೇ ಸಿಲಿಂಡರ್‌ನಿಂದ ಸ್ಫೋಟವಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ವಾಶ್‌ರೂಮ್‌ನೊಳಗೆ ಸ್ಫೋಟ ಸಂಭವಿಸಿದ್ದರಿಂದ ಸಿಲಿಂಡರ್ ಸ್ಫೋಟ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಲುಧಿಯಾನ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ಮಾತನಾಡಿ, ನ್ಯಾಯಾಲಯದ ಸಂಕೀರ್ಣದ ಒಳಗೆ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಭಯಪಡುವ ಅಗತ್ಯವಿಲ್ಲ. “ಲುಧಿಯಾನ ಕೋರ್ಟ್ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯ ರೆಕಾರ್ಡ್ ರೂಂ ಬಳಿ ಸ್ಫೋಟದ ಸದ್ದು ಕೇಳಿಬಂದಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಇಬ್ಬರು ಗಾಯಗೊಂಡಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡ ಮತ್ತು ಫೋರೆನ್ಸಿಕ್ಸ್ ತಂಡವನ್ನು ಚಂಡೀಗಢದಿಂದ ತನಿಖೆಗಾಗಿ ಕರೆಸಲಾಗಿದೆ” ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಲೂಧಿಯಾನಕ್ಕೆ ಹೋಗಲಿದ್ದಾರೆ ಎಂದು ಹೇಳಿದರು. “ನಾನು ಲೂಧಿಯಾನಕ್ಕೆ ಹೋಗುತ್ತಿದ್ದೇನೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವು ದೇಶವಿರೋಧಿಗಳು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಲರ್ಟ್ ಆಗಿದೆ. ತಪ್ಪಿತಸ್ಥರೆಂದು ಕಂಡುಬಂದವರನ್ನು ಬಿಡಲಾಗುವುದಿಲ್ಲ, ”ಎಂದು ಅವರು ಹೇಳಿದರು.








