ಪ್ರಮುಖ ಹುದ್ದೆಗಳನ್ನ ವಜಾ ಮಾಡಿದ ಟ್ವೀಟರ್ ಸಿಇಒ ಪರಾಗ್
ಭಾರತೀಯ ಮೂಲದ ಪರಾಗ್ ಅಗರ್ವಾಲ್ ಈಗಷ್ಟೇ ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಾಗಲೆ ಕಂಪನಿಯಲ್ಲಿ ದೊಡ್ಡ ಬದಲಾವಣೆ ತರಲು ಕೈ ಹಾಕಿದ್ದಾರೆ. ಕಂಪನಿಯ ಕೆಲವು ಪ್ರಮುಖ ಹುದ್ದೆಗಳನ್ನು ತೆಗೆದುಹಾಕುತ್ತಿದ್ದಾರೆ.
ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದ ಪೀಟರ್ ಜಟ್ಕೊ ಸೇರಿದಂತೆ ಮುಖ್ಯ ಮಾಹಿತಿ ಅಧಿಕಾರಿ ರಿಂಕಿ ಸೇಥಿ ಅವರನ್ನೂ ವಜಾ ಮಾಡಲಾಗಿದೆ ಎಂದು ಪರಾಗ್ ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಂಪನಿಯು ಹೇಗೆ ಮುಂದುವರಿಯಬೇಕು ಎಂಬುದರ ಪರಿಶೀಲನೆಯ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪರಾಗ್ ವಿವರಿಸಿದ್ದಾರೆ. ಪರಾಗ್ ಅಗರ್ವಾಲ್ ಕಳೆದ ವರ್ಷ ನವೆಂಬರ್ನಲ್ಲಿ ಟ್ವಿಟರ್ ಸಂಸ್ಥಾಪಕ ಜಾಕ್ ಡಾರ್ಸೆ ಅವರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಮುಖ ಸ್ಥಾನದಲ್ಲಿರುವವರನ್ನ ಬದಲಾವಣೆ ಮಾಡುತ್ತಿದ್ದಾರೆ, ಮುಖ್ಯ ವಿನ್ಯಾಸ ಅಧಿಕಾರಿ ಡಾಂಟ್ಲಿ ಡೇವಿಸ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮೈಕೆಲ್ ಮೊಂಟಾನೊ ಅವರನ್ನು ವಜಾ ಮಾಡಿದ್ದರು. ಪ್ರಸ್ತುತ ಗೌಪ್ಯತೆ ಇಂಜಿನಿಯರಿಂಗ್ ಮುಖ್ಯಸ್ಥರಾಗಿರುವ ಲೀ ಕಿಸ್ನರ್ ಅವರನ್ನು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಯಾಗಿ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.