ತುಮಕೂರು: ಆನ್ ಲೈನ್ ವಂಚಕನೊಬ್ಬ ಮಹಿಳೆಗೆ ವರ್ಕ್ ಫ್ರಮ್ ಹೋಂ (Work From Home) ಆಮಿಷವೊಡ್ಡಿ ಬರೋಬ್ಬರಿ 14.15 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಈ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಆನ್ಲೈನ್ನಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ (Sira) ಪಟ್ಟಣದ ಜ್ಯೋತಿ ನಗರದ ಬಿ.ವೀಣಾ ಎಂಬುವವರು ಹಣ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.
ಆರೋಪಿಗಳು ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿ ‘ವರ್ಕ್ ಫ್ರಮ್ ಹೋಂ’ ಬಗ್ಗೆ ವಿವರಿಸಿದ್ದಾರೆ. ನಂತರ ಲಿಂಕ್ವೊಂದನ್ನು ಕಳುಹಿಸಿ ಅದರಲ್ಲಿ ಲಾಗಿನ್ ಮಾಡಿಕೊಳ್ಳುವಂತೆ ಹೇಳಿದ್ದಾರೆ. ನಂತರ ವೀಣಾ ಮತ್ತು ಅವರ ಪತಿಯ ಬ್ಯಾಂಕ್ ಖಾತೆಯ ವಿವರ ಪಡೆದು, ಪತಿಯ ಖಾತೆಗೆ ಬೋನಸ್ ಎಂದು 800 ರೂ. ವರ್ಗಾವಣೆ ಮಾಡಿದ್ದಾರೆ.
ನಂತರ ಆನ್ಲೈನ್ ಟ್ರೇಡಿಂಗ್ನಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದರೆ ಜಾಸ್ತಿ ಲಾಭ ಪಡೆಯಬಹುದು ಎಂದು ಹೇಳಿ ನಂಬಿಸಿ 14.15 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ನಂತರ ದುಡ್ಡು ವಾಪಸ್ ಕೇಳಿದಾಗ ಇನ್ನೂ 18 ಲಕ್ಷ ರೂ. ಕಟ್ಟಿದರೆ ಮಾತ್ರ ಹಣ ಮರಳಿಸುತ್ತೇವೆ ಎಂದಿದ್ದಾರೆ. ಸದ್ಯ ವಂಚನೆಗೊಳಗಾದ ಮಹಿಳೆ ದೂರು ದಾಖಲಿಸಿದ್ದಾರೆ.