ಮೈಸೂರು: ಹೊರಗಿನಿಂದ ಬಿಜೆಪಿ ಪಕ್ಷಕ್ಕೆ ಬಂದ 17 ಮಂದಿ ನಮ್ಮ ಪಕ್ಷ ಕಟ್ಟಿದವರಲ್ಲ, ಕೇವಲ ಪಕ್ಷ ಅಧಿüಕಾರಕ್ಕೆ ಬರಲು ಸಹಕಾರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಬಹಿರಂಗ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ 17 ಮಂದಿ ನಮ್ಮ ಬಿಜೆಪಿ ಪಕ್ಷವನ್ನು ಕಟ್ಟಿದವರಲ್ಲ. ಕೇವಲ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದರಷ್ಟೇ. ಇವರು ಬರುವ ಮುನ್ನ ನಮ್ಮ ಪಕ್ಷದಲ್ಲಿ 105 ಮಂದಿ ಶಾಸಕರು ಇದ್ದರು ಎಂದು ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ, ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಹಿಂದೆ ಇದ್ದವರಿಗೂ ಕೊಡಬೇಕಲ್ವಾ ಎಂದರು.
ಬಿಜೆಪಿಯಿಂದ 105 ಮಂದಿ ಗೆದ್ದಿದ್ದರು ಎಂದು ಯಾರು ಲೆಕ್ಕ ಮಾಡುವುದಿಲ್ಲ. ಬೇರೆ ಪಕ್ಷದಿಂದ ಬಂದ 17 ಮಂದಿಯೇ ದೊಡ್ಡದಾಗಿ ಕಾಣಿಸುತ್ತಾರೆ. ನಮ್ಮ ಎಲ್ಲಾ ಶಾಸಕರು ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ, ಯಾರಾಗಬೇಕು ಎಂಬುದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿರುವುದು ಪಕ್ಷಾಂತರಿಗಳಿಗೆ ಸದಾನಂದಗೌಡ ಪರೋಕ್ಷ ತಿರುಗೇಟು ನೀಡಿದ್ದಾರೆ.
ಆರ್.ಆರ್ ನಗರ ಉಪಚುನಾವಣೆಯಲ್ಲಿ ಭರ್ಜರಿ ಮತಗಳ ಆಂತರದಿಂದ ಗೆಲುವು ಸಾಧಿಸಿ ಬಿಜೆಪಿ ಬಾವುಟ ಹಾರಿಸಿರುವ ಶಾಸಕ ಮುನಿರತ್ನ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಚುನಾವಣಾ ಪ್ರಚಾರದ ವೇಳೆಯೂ ಮುನಿರತ್ನ ಗೆದ್ದ ಮೇಲೆ ಸಚಿವರಾಗುತ್ತಾರೆ ಎಂದು ಸಿಎಂ ಯಡಿಯೂರಪ್ಪ ಬಹಿರಂಗವಾಗಿ ಘೋಷಣೆ ಮಾಡಿದ್ದರು.
ಮುನಿರತ್ನ ಒಂದು ಕಡೆಯಾದರೆ, ಯಡಿಯೂರಪ್ಪ ಸರ್ಕಾರ ರಚನೆಗಾಗಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಬಂದಿರುವ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಆರ್.ಶಂಕರ್ಗೂ ಸಚಿವ ಸ್ಥಾನ ನೀಡಬೇಕಿದೆ. ಹೀಗಾಗಿ ಈ ನಾಲ್ವರಿಗೂ ಸಚಿವ ಸ್ಥಾನ ನೀಡಬೇಕಾದರೆ ಹಾಲಿ ಸಂಪುಟದಲ್ಲಿರುವ ಕೆಲ ಸಚಿವರನ್ನು ಕೈಬಿಡಬೇಕು. ಹೀಗೆ ಮಾಡಿದರೆ ಸಂಪುಟದಲ್ಲಿ ವಲಸೆ ಬಂದಿರುವ ಶಾಸಕರೇ ತುಂಬಿ ಹೋಗುತ್ತಾರೆ. ಹೀಗಾಗಿ ಯಡಿಯೂರಪ್ಪ ಸಂಪುಟದ ಕೆಲ ಸಚಿವರನ್ನು ಕೈಬಿಟ್ಟು ಸಚಿವ ಸಂಪುಟ ಪುನಾರಚನೆ ಮಾಡುವ ಪ್ಲಾನ್ನಲ್ಲಿದ್ದಾರೆ.
ಸಂಪುಟ ಪುನಾರಚನೆ ಮಾಡಿ ಮೂಲ ಬಿಜೆಪಿ ಶಾಸಕರನ್ನು ಸಂಪುಟದಿಂದ ಕೈಬಿಟ್ಟರೆ ಹಲವು ದಶಕಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಶ್ರಮಿಸಿರುವ ಮೂಲ ಬಿಜೆಪಿಗರಿಗೆ ಅನ್ಯಾಯವಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ವಲಸೆ ಬಂದಿರುವ ಶಾಸಕರು ಬಿಜೆಪಿಯಲ್ಲೇ ಉಳಿಯುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಅಧಿಕಾರಕ್ಕೋಸ್ಕರ ಬಿಜೆಪಿಗೆ ಬಂದಿರುವ ಶಾಸಕರ ಒತ್ತಡವನ್ನು ನೋಡಿಯೂ ಸುಮ್ಮನೆ ಇರುವಂತಾಗಿದೆ ರಾಜ್ಯ ಬಿಜೆಪಿ ನಾಯಕರಿಗೆ.
ಸದಾನಂದಗೌಡ ಮಾತಿನ ಹಿಂದಿವೆ ಕೆಲ ಪ್ರಶ್ನೆಗಳು..
* 17 ಮಂದಿ ಶಾಸಕರು ಪಕ್ಷ ಕಟ್ಟಿದವರಲ್ಲ ?
*. ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ
* ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಉಳಿಯಲಾರರು ?
* ನಿಮ್ಮ ಒತ್ತಡ ತಂತ್ರಗಳನ್ನು ನಾವು ಇನ್ನು ಮುಂದೆ ಸಹಿಸಿಕೊಳ್ಳಲ್ಲ ?
* ಡಿವಿಎಸ್ ಮಾತಿನ ಹಿಂದೆ ದಿಲ್ಲಿ ಹೈಕಮಾಂಡ್ ಸಂದೇಶವಿದೆಯಾ ?
* ಸಿಎಂ ಯಡಿಯೂರಪ್ಪ ಕೆಳಗಿಳಿಯುವುದು ಪಕ್ಕಾ ಎಂಬ ಸಂದೇಶವಾ ?
* ಬಿಎಸ್ವೈ ಸಿಎಂಪಟ್ಟದಿಂದ ಇಳಿದ ಮೇಲೆ ಇವರು ಇರಲಾರರು
* ವಲಸೆ ಬಂದಿರುವ ಶಾಸಕರೆಲ್ಲಾ ಬಿಜೆಪಿಯಲ್ಲಿ ಇರಲಾರರು ಎಂಬ ಸಂದೇಶವಾ ?
ಹೀಗಾಗಿಯೇ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಈ ರೀತಿ ಹೇಳಿಕೆ ನೀಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 17 ಮಂದಿ ಶಾಸಕರು ಪಕ್ಷ ಕಟ್ಟಿದವರಲ್ಲ ಎಂದಿರುವ ಡಿವಿಎಸ್ ಹೇಳಿಕೆ, ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಉಳಿಯಲಾರರು ಎಂಬ ಪರೋಕ್ಷ ಸಂದೇಶದಂತಿದೆ. ಜೊತೆಗೆ ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ ಎನ್ನುವ ಮೂಲಕ ನಿಮ್ಮ ಒತ್ತಡ ತಂತ್ರಗಳನ್ನು ನಾವು ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಸಂದೇಶವಾ ? ಸದಾನಂದಗೌಡರ ಮಾತಿನ ಹಿಂದೆ ದಿಲ್ಲಿ ಹೈಕಮಾಂಡ್ ನಾಯಕರ ಮಟ್ಟದಲ್ಲಿ ನಡೆಯುತ್ತಿರುವ ರಣತಂತ್ರದ ಭಾಗವಾ ? ಒಂದು ವೇಳೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಸಿದ ಮೇಲೆ ವಲಸೆ ಬಂದಿರುವ ಶಾಸಕರೆಲ್ಲಾ ಬಿಜೆಪಿಯಲ್ಲಿ ಇರಲಾರರು ಎಂಬ ಸಂದೇಶವಾ ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel