ಘನಾ ದೇಶದಲ್ಲಿ ಟ್ರಕ್ ಸ್ಪೋಟ 17 ಮಂದಿ ಸಾವು….
ಚಿನ್ನದ ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಸ್ಪೋಟಗೊಂಡು ಕನಿಷ್ಠ 17 ಜನರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಘಾನಾ ದೇಶದಲ್ಲಿ ನಡೆದಿದೆ. ಟ್ರಕ್ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ನೆಲದಲ್ಲಿ ದೊಡ್ಡ ಕುಳಿಯನ್ನೇ ಸೃಷ್ಟಿಸಿದೆ. ಹತ್ತಾರು ಕಟ್ಟಡಗಳು ಧ್ವಂಸವಾಗಿವೆ.
ಸಾವು ನೋವುಗಳ ನಿಖರವಾದ ಸಂಖ್ಯೆಯನ್ನು ಸರ್ಕಾರ ದೃಢೀಕರಿಸಿಲ್ಲ, ಆದರೆ ಪ್ರೆಸ್ಟಿ ಹನಿ-ವ್ಯಾಲಿ ಪುರಸಭೆಯ ಸರ್ಕಾರದ ಮುಖ್ಯಸ್ಥ ಐಸಾಕ್ ದಾಸ್ಮಾನಿ ಅವರು ಸ್ಥಳಿಯ ಮಾಧ್ಯಮಗಳಿಗೆ 17 ಮೃತದೇಹಗಳು ದೊರಕಿದ್ದಾಗಿ ಹೇಳಿದ್ದಾರೆ. 60ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಾನಾದ ಪಶ್ಚಿಮ ಪ್ರದೇಶದ ಬೊಗೊಸೊ ಮತ್ತು ಬೌಡಿ ನಡುವಿನ ಅಪಿಯೇಟ್ನಲ್ಲಿ ಸ್ಫೋಟ ಸಂಭವಿಸಿದೆ.
https://twitter.com/i/status/1484303437185822721
ಜನರನ್ನು ಓಡಿಹೋಗುವಂತೆ ಎಚ್ಚರಿಸಿದ ಚಾಲಕ
ಮೋಟಾರು ಸೈಕಲ್ಗೆ ಬೆಂಕಿ ಹೊತ್ತಿಕೊಂಡ ನಂತರ ಚಾಲಕ ಕೆಳಗಿಳಿದು ಜನರನ್ನು ಓಡಿ ಹೋಗುವಂತೆ ಎಚ್ಚರಿಸಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸುಮಾರು 10 ನಿಮಿಷಗಳ ನಂತರ, ಸ್ಫೋಟಕಗಳನ್ನು ತುಂಬಿದ ಟ್ರಕ್ ಸ್ಫೋಟಗೊಂಡಿದೆ. ಸ್ಫೋಟಕಗಳನ್ನು ತುಂಬಿದ ಟ್ರಕ್ ಚಿರಾನೋ ಗೋಲ್ಡ್ ಮೈನ್ಗೆ ತೆರಳುತ್ತಿತ್ತು. ಇದು ಗಣಿಯಿಂದ 140 ಕಿಮೀ (87 ಮೈಲಿ) ದೂರದಲ್ಲಿತ್ತು.
ಸಂತಾಪ ವ್ಯಕ್ತಪಡಿಸಿದ ಅಧ್ಯಕ್ಷರು
ಘಾನಾದ ಅಧ್ಯಕ್ಷ ನಾನಾ ಅಡ್ಡೋ ದಾಂಕ್ವಾ ಅಕುಫೊ-ಅಡ್ಡೋ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಪಶ್ಚಿಮ ಪ್ರದೇಶದ ಬೊಗೊಸೊ ಬಳಿ ಸ್ಫೋಟ ಸಂಭವಿಸಿದೆ. ಇದು ನಿಜಕ್ಕೂ ದುರದೃಷ್ಟಕರ ಮತ್ತು ದುಃಖಕರ ಘಟನೆ. ಸರ್ಕಾರದ ಪರವಾಗಿ, ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ”. ಎಂದು ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.








