ನವದೆಹಲಿ: ಹಲವು ಕ್ರಮಗಳ ಹೊರತಾಗಿಯೂ ದೇಶದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,553 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 17,265ಕ್ಕೆ ಏರಿಕೆಯಾಗಿದೆ. ಇನ್ನು, ಇದೇ ಅವಧಿಯಲ್ಲಿ 36 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆಯಾಗಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 543 ಏರಿಕೆಯಾಗಿದೆ. ಸದ್ಯ ದೇಶದಲ್ಲಿ 14,175 ಕೇಸ್ ಗಳು ಆಕ್ಟಿವ್ ಆಗಿದ್ದು,2,546 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಮತ್ತೆ ಐವರಿಗೆ ಕೊರೊನಾ!
ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನತೆ ತಲ್ಲಣಗೊಂಡಿದ್ದಾರೆ. ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಮತ್ತೆ ಐವರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಳಗ್ಗೆಯವರೆಗೆ ಮತ್ತೆ ಐವರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ. ಈ ಐದು ಪ್ರಕರಣಗಳು ಕಲಬುರಗಿ ಜಿಲ್ಲೆಯದ್ದೇ ಆಗಿದೆ.








