ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಮರಣ ಮೃದಂಗವನ್ನು ಮುಂದುವರಿಸಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದರಂತೆ ದೇಶದಲ್ಲಿ ಕೊರೊನಾಸುರನಿಗೆ ಬಲಿಯಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಮಾರ್ಚ್ 28 ರಂದು ಈತನಲ್ಲಿ ಸೋಂಕು ಪತ್ತೆಯಾಗಿದ್ದು, ಪಲ್ಘರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮಧ್ಯೆ 18 ಮಂದಿಯಲ್ಲಿ ಮತ್ತೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 1,703ಕ್ಕೆ ಏರಿಕೆಯಾಗಿದೆ.
ಮಾರ್ಚ್ 31ರಿಂದ ಇಂದು ಬೆಳಿಗ್ಗೆ 9 ಗಂಟೆಯವರೆಗಿನ ವರದಿಗಳ ಪ್ರಕಾರ ಆಂಧ್ರಪ್ರದೇಶ ರಾಜ್ಯದಲ್ಲಿ ಒಟ್ಟು 43 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರಂತೆ ಆಂಧ್ರಪ್ರದೇಶದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.








