ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ, ಅಗತ್ಯ ಔಷಧಿ ಪಡೆಯಲಾಗಿದೆ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಪ್ಪು ಶಿಲೀಂಧ್ರ ಸೋಂಕಿನ ಎಲ್ಲಾ ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈವರೆಗೆ 1,784 ಪ್ರಕರಣ ಕಂಡುಬಂದಿದೆ. ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಾಗಲೇ 62 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೆ ದುರದೃಷ್ಟ 111 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.
ಕಪ್ಪು ಶಿಲೀಂಧ್ರ ಸೋಂಕಿಗೆ ಅಂಪೊಟೆರಿಸಿನ್ ಬಿ ಔಷಧಿ ವೈಲ್ ಬೇಕಾಗುತ್ತದೆ. ಕೇಂದ್ರ ಸರ್ಕಾರವು 9,750 ವೈಲ್ ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಇದರಲ್ಲಿ 8,860 ವೈಲ್ ನಿನ್ನೆ ಬಂದಿದೆ. ಒಟ್ಟು 18,650 ವೈಲ್ ಗಳು ರಾಜ್ಯಕ್ಕೆ ದೊರೆತಿದೆ. ಸರ್ಕಾರಿ ಆಸ್ಪತ್ರೆಗಳಿಗೆ 8,860 ವೈಲ್ ಗಳನ್ನು ಬಳಸಲಾಗಿದೆ. ಖಾಸಗಿ ಆಸ್ಪತ್ರೆಗಳು ಸೇರಿ ಬೇರೆ ಕಡೆಗಳಿಗೆ 9,740 ವೈಲ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಲಸಿಕೆಯ 58 ಲಕ್ಷ ಡೋಸ್ ಗಳನ್ನು ನೀಡಲಾಗುವುದು. 70-75 ಲಕ್ಷ ಜನರಿಗೆ ಇದೇ ತಿಂಗಳಲ್ಲಿ ಲಸಿಕೆ ಹಾಕಲಾಗುವುದು. ರಾಜ್ಯದಲ್ಲಿ ಈವರೆಗೆ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಜೂನ್ ಅಂತ್ಯಕ್ಕೆ ರಾಜ್ಯದ 2.25 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ಆದಷ್ಟು ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ ದೊರೆಯಲಿದೆ ಎಂದರು.