ರಸ್ತೆ ಅಪಘಾತದಲ್ಲಿ ಯುವ ಟೇಬಲ್ ಟೆನಿಸ್ ಆಟಗಾರ ಸಾವು…
ತಮಿಳುನಾಡು ಮೂಲದ ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ರಸ್ತೆ ಅಪಘಾತದಲ್ಲಿ ಭಾನುವಾರ ಸಾವನ್ನಪ್ಪಿದ್ದಾರೆ.
ಭಾನುವಾರದಂದು ಶಿಲಾಂಗ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 18 ವರ್ಷದ ವಿಶ್ವ ದೀನದಯಾಳನ್ ಅವರು ತಂಡದ ಮೂವರು ಸಹ ಆಟಗಾರರ ಜೊತೆ ಗುವಾಹಟಿಯಿಂದ ಶಿಲಾಂಗ್‌ಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಂಭಾಗದಿಂದಲ್ಲಿ ಬರುತ್ತಿದ್ದ 12 ವೀಲ್ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿಗೆ ಗುದ್ದಿದೆ. ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ವಿಶ್ವ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇನ್ನು ರಮೇಶ್ ಸಂತೋಷ್ ಕುಮಾರ್, ಅವಿನಾಶ್ ಪ್ರಸನ್ನಜಿ ಮತ್ತು ಕಿಶೋರ್ ಕುಮಾರ್ ಎಂಬ ಆಟಗಾರರು ಗಂಭೀರ ಗಾಯಗೊಂಡಿದ್ದಾರೆ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.
ರಾಷ್ಟ್ರೀಯ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿಶ್ವ ದೀನದಯಾಳ್ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನ ಪ್ರತಿನಿಧಿಸಿ ಪದಕಗಳನ್ನ ಗಳಿಸಿದ್ದಾರೆ. ಇದೇ 27ರಿಂದ ಆಸ್ಟ್ರಿಯಾದ ಲಿನ್ಜ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ನಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು.