ಗರ್ಭಿಣಿ ಮಹಿಳೆಗಾಗಿ 2.5KM ಹಿಂದಕ್ಕೆ ಬಂದ ರೈಲು
ರೈಲ್ವೆ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ಬಳಿಕ ತುಂಬು ಗರ್ಭಿಣಿಗೆ ಹೆರಿಗೆ ಕಾಣಿಸಿಕೊಂಡಿದ್ದು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ತಾಯಿ ಮಗುವಿಗಾಗಿ 2.5 ಕಿಲೋ ಮಿಟರ್ ಮುಂದಕ್ಕೆ ಸಾಗಿದ್ದ ರೈಲನ್ನ ಅಧಿಕಾರಿಗಳು ಹಿಂದಕ್ಕೆ ಕರೆಸಿಕೊಂಡಿರುವ ಘಟನೆ ಟಾಟಾನಗರದಲ್ಲಿ ನಡೆದಿದೆ.
ರಾನು ದಾಸ್ ಎಂಬ ಮಹಿಳೆ ಸಂಪರ್ಕ್ ಕ್ರಾಂತಿ ಎಕ್ಸಪ್ರೆಸ್ ರೈಲಿನಲ್ಲಿ ಒಡಿಶಾಗೆ ಹೋಗುತ್ತಿದ್ದರು. ದೆಹಲಿಯಿಂದ ಹೊರಟಿದ್ದ ರೈಲು ಮುಂಜಾವು ಜೆಮ್ ಶೆಡ್ ಪುರದ ಟಾಟಾ ನಗರಕ್ಕೆ 3.55ಕ್ಕೆ ಬಂದಿದೆ. ನಿಲ್ದಾಣದಿಂದ ಹೊರಟ ಕೆಲವೇ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯ ಕುಟುಂಬಸ್ಥರು ರೈಲಿನ ತುರ್ತು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ.
ಬಳಿಕ ಆಕೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ರೈಲು ನಿಂತಿರುವುದನ್ನು ತಿಳಿದ ಆರ್‌ಪಿಎಫ್ ಸಿಬ್ಬಂದಿ, ಟಾಟಾನಗರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಪರಿಸ್ಥಿತಿ ಅರ್ಥ ಮಾಡಿಕೊಂಡ ಅಧಿಕಾರಿಗಳು ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ಟಾಟಾನಗರ ನಿಲ್ದಾಣಕ್ಕೆ ಮತ್ತೆ ವಾಪಸ್ ಕರೆಸಿದ್ದಾರೆ..ಇದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆ ಆದರೂ ಈ ಕೆಲಸಕ್ಕೆ ಸಹ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಳಿಕ ತಾಯಿ ಮಗುವನ್ನ ಆ್ಯಂಬುಲೆನ್ಸ್ ಮೂಲಕ ಖಾಸ್ಮಹಲ್ ಸರ್ದಾರ್ ಆಸ್ಪತ್ರೆಗೆ ರವಾನಿಸಲಾಗಿದೆ ಸದ್ಯ ಇಬ್ಬರೂ ಸುರಕ್ಷಿತವಾಗಿದ್ದಾರೆ. ಘಟನೆಯಿಂದ ರೈಲು ಸಂಚಾರ ಒಂದು ಗಂಟೆ ತಡವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.